ADVERTISEMENT

ಸಿಸಿಬಿ ಹೆಸರಿನಲ್ಲಿ ಹಣ ವಸೂಲಿ: ಫೈರ್‌ಮನ್ ಬಂಧನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 4:26 IST
Last Updated 28 ಸೆಪ್ಟೆಂಬರ್ 2022, 4:26 IST
ಆನಂದ್
ಆನಂದ್   

ಬೆಂಗಳೂರು: ಸಿಸಿಬಿ ಅಧಿಕಾರಿಗಳ ಹೆಸರಿನಲ್ಲಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಫೈರ್‌ಮನ್ ಆನಂದ್ (34) ಅವರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತ ಆನಂದ್, ಅಥಣಿಯ ಅಗ್ನಿಶಾಮಕ ದಳದ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ. ಇವರ ವಿರುದ್ಧ ಸ್ಪಾ ಆ್ಯಂಡ್ ಸಲೂನ್‌ ಒಂದರ ಮಾಲೀಕ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆನಂದ್‌ನನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿ
ದ್ದಾನೆ’ ಎಂದು ಪೊಲೀಸರು ಹೇಳಿದರು.

‘ಈ ಹಿಂದೆ ಪೀಣ್ಯ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದ ಆನಂದ್‌, ಅಧಿಕಾರಿಗಳ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದ. ಇದೇ ಪ್ರಕರಣದಲ್ಲಿ ಈತನನ್ನು ಅಮಾನತು ಮಾಡಲಾಗಿತ್ತು. ನಿಗದಿತ ಕಾಲಾವಧಿ ಬಳಿಕ ಅಮಾನತು ಹಿಂಪಡೆದು, ಅಥಣಿ ಠಾಣೆಗೆ ನಿಯೋಜಿಸಲಾಗಿತ್ತು. ಆಗಾಗ ಬೆಂಗಳೂರಿಗೆ ಬರುತ್ತಿದ್ದ ಆರೋಪಿ, ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ’ ಎಂದೂ ತಿಳಿಸಿದರು.

ADVERTISEMENT

₹ 20 ಸಾವಿರ ವಸೂಲಿ: ‘ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯ ಸ್ಪಾ ಆ್ಯಂಡ್ ಸಲೂನ್‌ಗೆ ಇತ್ತೀಚೆಗೆ ಹೋಗಿದ್ದ ಆರೋಪಿ ಆನಂದ್, ಸಿಸಿಬಿ ಅಧಿಕಾರಿಗಳ ಆಪ್ತನೆಂದು ಹೇಳಿಕೊಂಡಿದ್ದ. ಮಳಿಗೆ ಮೇಲೆ ದಾಳಿ ಮಾಡಿಸುವುದಾಗಿ ಬೆದರಿಸಿ ₹ 20 ಸಾವಿರ ವಸೂಲಿ ಮಾಡಿದ್ದ. ಪ್ರತಿ ತಿಂಗಳು ಹಣ ನೀಡುವಂತೆ ಎಚ್ಚರಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಹಣ ನೀಡಿದ್ದ ಸ್ಪಾ ಆ್ಯಂಡ್ ಸಲೂನ್‌ ಮಾಲೀಕರು, ಆರೋಪಿ ಬಗ್ಗೆ ಪೊಲೀಸರ ಬಳಿ ವಿಚಾರಿಸಿದ್ದರು. ಆನಂದ್ ಎಂಬುವವರು ಸಿಸಿಬಿಯಲ್ಲಿ ಇಲ್ಲವೆಂಬುದು ಗೊತ್ತಾಗಿತ್ತು. ಅವಾಗಲೇ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಮೇತ ಠಾಣೆಗೆ ದೂರು ನೀಡಿದ್ದರು’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.