
ಪ್ರಜಾವಾಣಿ ವಾರ್ತೆ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸೋಮವಾರ ಮುಂಜಾನೆ ದಟ್ಟವಾಗಿ ಮಂಜು ಆವರಿಸಿದ್ದರಿಂದ 48 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ಬೆಳಗ್ಗೆ 4.39 ರಿಂದ 10.30 ಗಂಟೆವರೆಗೂ ರನ್ ವೇ ಸಂಪೂರ್ಣ ಮಂಜಿನಿಂದ ಆವೃತ್ತವಾಗಿತ್ತು. ಇದರಿಂದಾಗಿ ಎರಡು ಅಂತರ ರಾಷ್ಟ್ರೀಯ ವಿಮಾನ ಹಾಗೂ 46 ದೇಶೀಯ ವಿಮಾನ ತಲುಪುವುದು ವಿಳಂಬವಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ಮಾಹಿತಿ ನೀಡಿದ್ದಾರೆ.
ಹವಾಮಾನ ಇಲಾಖೆ ಪ್ರಕಾರ ಡಿ.15ರಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 14.6 ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಸರಾಸರಿ ತಾಪಮಾನಕ್ಕಿಂತ 2.2 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಎಂದು ಹೇಳಿದೆ.
ಅಷ್ಟೇ ಅಲ್ಲದೇ ದೇವನಹಳ್ಳಿ ಸುತ್ತಮುತ್ತ ಹೆದ್ದಾರಿಗಳಲ್ಲಿ ಮುಂಜಾನೆ ಬಹಳ ಹೊತ್ತು ಮಂಜು ಕವಿದಿದ್ದ ಕಾರಣ ವಾಹನಗಳು ನಿಧಾನ ಗತಿಯಲ್ಲಿ ಸಾಗಿದವು.