ADVERTISEMENT

ಕಳೆಗುಂದಿದ ಮಾರುಕಟ್ಟೆ l ಹೂವಿನಂತೆ ಬಾಡುತ್ತಿದೆ ಬದುಕು!

ವ್ಯಾಪಾರ ಇಲ್ಲದೆ ಕೊಳೆಯುತ್ತಿರುವ ಹೂವು, ಹಣ್ಣು, ತರಕಾರಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2020, 2:10 IST
Last Updated 15 ಏಪ್ರಿಲ್ 2020, 2:10 IST
ಗ್ರಾಹಕರಿಗಾಗಿ ಕಾಯುತ್ತಿರುವ ವರ್ತಕರು
ಗ್ರಾಹಕರಿಗಾಗಿ ಕಾಯುತ್ತಿರುವ ವರ್ತಕರು   

ಬೆಂಗಳೂರು: ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ ಮಲ್ಲೇಶ್ವರದ ಪ್ರಸಿದ್ಧ ಹೂವಿನ ಮಾರುಕಟ್ಟೆಯಲ್ಲಿ ಎಂದಿನ ‘ಜೀವಕಳೆ‘ ಮರೆಯಾಗಿದೆ.

ಅಂಗಡಿಯ ಮುಂದೆ ನೇತು ಹಾಕಿರುವ ಆಳೆತ್ತರದ ಗುಲಾಬಿ, ಮಲ್ಲಿಗೆ, ಸೇವಂತಿಗೆ ಹೂವಿನ ಮಾಲೆಗಳು ಅಲ್ಲಿಯೇ ಬಾಡಿ ಹೋಗಿವೆ. ನಳ, ನಳಿಸುತ್ತಿದ್ದ ಹೂವುಗಳು ಕಪ್ಪಿಟ್ಟಿವೆ.

‘ಬನ್ನಿ ಅಣ್ಣಾ, ಅಕ್ಕಾ... ಎಷ್ಟು ಮೊಳ ಹೂವು ಕೊಡಲಿ’ ಎಂದು ಜನರನ್ನು ಕೂಗಿ ಕರೆಯುತ್ತಿದ್ದ ಮಾರಾಟಗಾರರ ಧ್ವನಿ ಕ್ಷೀಣವಾಗಿದೆ.

ADVERTISEMENT

ದಿನವಿಡೀ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಮಲ್ಲೇಶ್ವರ ಮಾರುಕಟ್ಟೆ ಲಾಕ್‌ಡೌನ್‌ನಿಂದಾಗಿ ಬಿಕೋ ಎನ್ನುತ್ತಿದೆ. ರಸ್ತೆಗಳು ಬರಿದಾಗಿವೆ. ಕೊರೊನಾಕ್ಕೆ ಹೆದರಿ ಜನರು ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ. ವ್ಯಾಪಾರಸ್ಥರು ಉಭಯ ಕುಶಲೋಪರಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

‘ಎಷ್ಟೇ ದುಬಾರಿಯಾದರೂ ಮನೆಯ ಬಳಿ ಬರುವ ವ್ಯಾಪಾರಿಗಳಿಂದಲೇ ಜನರು ತರಕಾರಿ ಖರೀದಿಸುತ್ತಿದ್ದಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಕುಳಿತರೂ ನೂರು ರೂಪಾಯಿ ವ್ಯಾಪಾರ ಆಗುತ್ತಿಲ್ಲ.ಹೂವು, ಹಣ್ಣು ಮತ್ತು ತರಕಾರಿ ಕೊಳೆತು ಹೋಗುತ್ತಿವೆ. ಮನೆಗೆ ಮರಳುವಾಗ ಹೂವು, ಸೊಪ್ಪು, ಟೊಮೆಟೊಗಳನ್ನು ಚರಂಡಿಗೆ ಸುರಿಯುತ್ತಿದ್ದೇವೆ’ ಎಂದು ಮಹಿಳಾ ವರ್ತಕರು ಕಣ್ಣೀರಾಗುತ್ತಾರೆ.

‘ಲಾಕ್‌ಡೌನ್‌ ಶುರುವಾದಾಗಿನಿಂದ ಹೂವಿನ ವ್ಯಾಪಾರ ಸಂಪೂರ್ಣ ನಿಂತು ಹೋಗಿದೆ. ವಿಶೇಷ ಪಾಸ್‌ ಇರುವವರು ಮಾತ್ರ ಮಾರುಕಟ್ಟೆಗೆ ಬರುತ್ತಾರೆ. ಜನರು ಹಣ್ಣು ಮತ್ತು ತರಕಾರಿ ಖರೀದಿಸುತ್ತಾರೆ. ಆದರೆ, ಹೂವುಗಳನ್ನಂತೂ ಕೇಳೋರು ಯಾರೂ ಇಲ್ಲ.ಮಾರಾಟ ಮಾಡಲು ತಂದ ಹೂವು ಮೂರ‍್ನಾಲ್ಕು ದಿನಗಳಲ್ಲಿ ಕೊಳೆತು ಹೋಗುತ್ತಿವೆ’ ಎಂದು ಮಂಜುಳಾ ತಮ್ಮ ಅಂಗಡಿಯಲ್ಲಿ ಬಾಡಿ ಹೋಗಿದ್ದ ಹೂವಿನ ರಾಶಿಯನ್ನು ತೋರಿಸಿದರು.

‘ಇದು ದುಂಡು ಮಲ್ಲಿಗೆ, ಕನಕಾಂಬರ ಹೂವುಗಳ ಸೀಸನ್‌. ಆದರೆ ಹೂವುಗಳನ್ನು ಮುಡಿಯುವವರು ಮಾರುಕಟ್ಟೆಗೆ ಬರುವುದಿಲ್ಲ. ದೇವಸ್ಥಾನಗಳೂ ತೆರೆದಿಲ್ಲ. ಮದುವೆ, ಮುಂಜಿಯಂತಹ ಸಮಾರಂಭಗಳೂ ನಡೆಯುತ್ತಿಲ್ಲ. ಹೀಗಾಗಿ ಹೂವಿಗೆ ಬೇಡಿಕೆ ಇಲ್ಲ.ನೀರು ಚಿಮುಕಿಸಿ ಇಟ್ಟರೆ ಎರಡು ದಿನ ಇರುತ್ತವೆ. ಬಿಸಿಲಿಗೆ ಬಾಡಿ ಹೋಗುತ್ತವೆ’ ಎಂದು ಪಕ್ಕದಲ್ಲಿದ್ದ ಮತ್ತೊಬ್ಬ ಮಹಿಳೆ ಬೇಸರದಿಂದ ನುಡಿದರು.

‘ಮಾಮೂಲಿ ದಿನಗಳಲ್ಲಿ ₹200 ರಿಂದ ₹250ರವರೆಗೆ ಮಾರಾಟವಾಗುತ್ತಿದ್ದ ಹೂವಿನ ಹಾರಗಳನ್ನು ₹50ಕ್ಕೆ ಕೊಡುತ್ತೇವೆ ಎಂದರೂ ಕೇಳುವವರಿಲ್ಲ. ಫೈನಾನ್ಸ್‌ನಿಂದ ಪಡೆದ ಸಾಲದ ಬಡ್ಡಿ ಹಣ ಹೇಗೆ ಕಟ್ಟಲಿ. ನಿತ್ಯ ಕಟ್ಟುತ್ತಿದ್ದ ಪಿಗ್ಮಿ ಹಣಕ್ಕೆ ಏನ್ಮಾಡಲಿ. ಮನೆ ಬಾಡಿಗೆ ಎಲ್ಲಿಂದ ತಂದು ಕೊಡಲಿ’ ಎಂದು ಕೃಷ್ಣವೇಣಿ ಕೇಳುತ್ತಾರೆ.

ಈ ಬೇಸರ, ನೋವಿನ ನುಡಿಗಳು ಕೇವಲ ಒಬ್ಬಿಬ್ಬರದ್ದಲ್ಲ. ಇಲ್ಲಿರುವ ಬಹುತೇಕ ಬೀದಿಬದಿ ವರ್ತಕರದ್ದೂ ಇದೇ ನೋವು. ಇನ್ನೂ 15 ದಿನ ಲಾಕ್‌ಡೌನ್‌ ಮುಂದುವರಿದರೆ ಮುಂದೇನು ಎಂಬ ಚಿಂತೆ ಬಹುವಾಗಿ ಕಾಡುತ್ತಿದೆ.

ಬಾಳೆಎಲೆ ಅಂಗಡಿಯಲ್ಲಿಕಾಲಹರಣಕ್ಕೆ ಜೂಜು

ಕಾಲಹರಣ ಮಾಡಲು ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಕೆಲವರು ಗುಂಪುಗೂಡಿ ಜೂಜಾಟ, ಹುಲಿಮನೆ, ಚೌಕಾಬಾರಾ ಆಟದಲ್ಲಿ ತೊಡಗಿರುವುದು ಕಂಡುಬಂತು.

ಮಲ್ಲೇಶ್ವರ 8ನೇ ಕ್ರಾಸ್‌ನಲ್ಲಿ ಯವಕರ ಗುಂಪೊಂದು ಹಣ ಹಚ್ಚಿ ಜೂಜಾಟದಲ್ಲಿ ತೊಡಗಿತ್ತು. 13ನೇ ಕ್ರಾಸ್‌ನಲ್ಲಿರುವ ಹೂವಿನ ಮಾರುಕಟ್ಟೆಯ ಆರಂಭದಲ್ಲಿರುವ ಬಾಳೆಎಲೆ ಅಂಗಡಿಯಲ್ಲಿ ಮಹಿಳೆಯರ ದೊಡ್ಡ ಗುಂಪು ನೆರೆದಿತ್ತು.

ಪ್ರತಿದಿನ ಇಲ್ಲಿ ಮಾಸ್ಕ್‌ ಧರಿಸದ ಹತ್ತಾರು ಮಹಿಳೆಯರು, ಮಕ್ಕಳನ್ನುಸೇರಿಸಿಕೊಂಡು ಹುಲಿಮನೆ ಆಡುತ್ತಿರುತ್ತಾರೆ.

‘ಮಾಸ್ಕ್ ಧರಿಸದೆ ಒಂದೆಡೆ ಗುಂಪು ಸೇರುವುದು ಸರಿಯಲ್ಲ’ ಎಂದು ಆಕ್ಷೇಪ ಎತ್ತಿದ ಗ್ರಾಹಕರ ಮೇಲೆ ಬಾಳೆಎಲೆ ಅಂಗಡಿಯ ಯುವಕ ಮತ್ತು ಮಹಿಳೆಯರ ಗುಂಪು ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.