ADVERTISEMENT

ಬೆಂಗಳೂರು | ಮೇಲ್ಸೇತುವೆ ಕಾಮಗಾರಿ... ಜನರಿಗೆ ಕಿರಿಕಿರಿ

ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಳ, ನಾಗರಿಕರಿಗೆ ನಿತ್ಯವೂ ಸಂಕಷ್ಟ, ಸಮಸ್ಯೆ ಪರಿಹರಿಸದ ಎಂಜಿನಿಯರ್‌ಗಳು

ಆರ್. ಮಂಜುನಾಥ್
Published 29 ಜನವರಿ 2025, 23:30 IST
Last Updated 29 ಜನವರಿ 2025, 23:30 IST
ಮೈಸೂರು ರಸ್ತೆ ಬಳಿಯ ಹೊರವರ್ತುಲ ರಸ್ತೆಯಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ‘ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌’ ಕಾಮಗಾರಿ
ಪ್ರಜಾವಾಣಿ ಚಿತ್ರ: ರಂಜು ಪಿ.
ಮೈಸೂರು ರಸ್ತೆ ಬಳಿಯ ಹೊರವರ್ತುಲ ರಸ್ತೆಯಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ‘ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌’ ಕಾಮಗಾರಿ ಪ್ರಜಾವಾಣಿ ಚಿತ್ರ: ರಂಜು ಪಿ.   

ಬೆಂಗಳೂರು: ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಆರಂಭವಾಗಿರುವ ಮೇಲ್ಸೇತುವೆ ಕಾಮಗಾರಿಗಳು ವರ್ಷಗಳು ಕಳೆದರೂ ಮುಗಿದಿಲ್ಲ. ಈ ಕಾಮಗಾರಿಗಳೇ ಸಂಚಾರ ದಟ್ಟಣೆಯನ್ಜು ಹೆಚ್ಚಿಸಿವೆ.

ಮೈಸೂರು ರಸ್ತೆ–ನೈಸ್‌ ಜಂಕ್ಷನ್‌ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿ ಆರಂಭವಾಗಿ ನಾಲ್ಕೂವರೆ ವರ್ಷವಾಗಿದೆ. ಹೊರವರ್ತುಲ ರಸ್ತೆಯಲ್ಲಿ ಸಿಗ್ನಲ್‌ರಹಿತ ಸಂಚಾರ ಹಾಗೂ ಹೊಸಕೆರೆಹಳ್ಳಿ ಕೋಡಿರಸ್ತೆ ಹಾಗೂ ಗಿರಿನಗರದ ಕಡೆಗೆ ಮುಕ್ತ ಸಂಚಾರಕ್ಕೆ ಅನುವಾಗುವ ಗ್ರೇಡ್‌ ಸೆಪರೇಟರ್‌ ಕಾಮಗಾರಿ 2020ರ ಆಗಸ್ಟ್‌ನಲ್ಲಿ ಆರಂಭವಾಗಿದ್ದು, 15 ತಿಂಗಳಲ್ಲಿ ಮುಗಿಯಬೇಕಿತ್ತು. ಇನ್ನೂ ಒಂದು ವರ್ಷ ಕಾಮಗಾರಿ ಮುಗಿಯದ ಪರಿಸ್ಥಿತಿ ಇದೆ.

ಮುಖ್ಯಮಂತ್ರಿಯವರ ನವ ನಗರೋತ್ಥಾನ ಅನುದಾನದಲ್ಲಿ ಆರಂಭವಾಗಿರುವ ‘ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆ ಜಂಕ್ಷನ್‌ ಗ್ರೇಡ್‌ ಸೆಪರೇಟರ್‌’ ಕಾಮಗಾರಿಯನ್ನು ಪಿಜೆಪಿ ಎಂಜಿನಿಯರ್ಸ್‌ ಸಂಸ್ಥೆ ನಡೆಸುತ್ತಿದೆ. ನೈಸ್‌ ಲಿಂಕ್‌ ರಸ್ತೆಗೆ ಹೊಂದಿಕೊಂಡಿರುವ ಹೊಸಕೆರೆಹಳ್ಳಿ ಕೆರೆಕೋಡಿ ರಸ್ತೆ ಜಂಕ್ಷನ್‌ನಲ್ಲಿ ಗ್ರೇಡ್‌ ಸೆಪರೇಟರ್‌ ಕಾಮಗಾರಿಯಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕಕ್ಕೆ ರಸ್ತೆ ಇಲ್ಲದಂತಾಗಿದೆ. ಹೊಸಕೆರೆಹಳ್ಳಿ, ಬಂಗಾರಪ್ಪನಗರ, ಮೂಕಾಂಬಿಕೆನಗರ, ಪ್ರಮೋದ ಲೇಔಟ್‌, ಗಿರಿನಗರ, ಗಣಪತಿನಗರ, ಆವಲಹಳ್ಳಿ ಪ್ರದೇಶಗಳ ನಿವಾಸಿಗಳಿಗೆ ಗ್ರೇಡ್‌ ಸೆಪರೇಟರ್‌ ಕಾಮಗಾರಿ ಪ್ರದೇಶದ ಸುತ್ತ ನಿರ್ಮಿಸಲಾಗಿರುವ ತಡೆಗೋಡೆಯನ್ನು ಏಕಮುಖ ರಸ್ತೆಯಲ್ಲಿ ಅರ್ಧ ಕಿ.ಮೀ. ಸಂಚರಿಸಿ, ಯೂಟರ್ನ್ ಪಡೆದು ಮತ್ತೆ ಅರ್ಧ ಕಿ.ಮೀ. ಸಾಗಬೇಕಾಗಿದೆ.

ADVERTISEMENT

‘ಗ್ರೇಡ್‌ ಸೆಪರೇಟರ್‌ ಕಾಮಗಾರಿಯಿಂದ ಉಳಿದಿರುವ ರಸ್ತೆಯ ಅಗಲ ಕಡಿಮೆಯಾಗಿದ್ದು, ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗಳ ವಾಹನಗಳು, ಮಕ್ಕಳನ್ನು ಶಾಲೆಗೆ ಬಿಡಲು ಹೋಗುವ ಪೋಷಕರು, ಕಚೇರಿಗೆ ಹೋಗುವವರರು ಇಲ್ಲಿನ ಅವ್ಯವಸ್ಥೆಯಿಂದ ಕಾಯಬೇಕಾಗುತ್ತದೆ, ಅಲ್ಲದೆ ನಿರ್ದಿಷ್ಟ ಸ್ಥಳ ತಲುಪಲು ವಿಳಂಬವಾಗುತ್ತಿದೆ’ ಎಂದು ಸ್ಥಳೀಯರಾದ ಗೋಪಾಲರಾವ್‌, ಜಗದೀಶ್‌, ಮಂಜುಳಾ ದೂರಿದರು.

ರಾಜರಾಜೇಶ್ವರಿನಗರದ ಮುಖ್ಯದ್ವಾರದ ಬಳಿಯಿರುವ ‘ಸಿಗ್ನಲ್‌ ಫ್ರೀ ರೋಟರಿ’ ಕಾಮಗಾರಿ ಸ್ಥಗಿತಗೊಂಡಿದ್ದು ಪಿಲ್ಲರ್‌ ತುಕ್ಕು ಹಿಡಿದಿರುವುದು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ತುಕ್ಕು ಹಿಡಿದ ಪಿಲ್ಲರ್‌: ಮೈಸೂರು ರಸ್ತೆ ಹಾಗೂ ರಾಜರಾಜೇಶ್ವರಿನಗರಕ್ಕೆ ಸಿಗ್ನಲ್‌ ಮುಕ್ತ ಸಂಚಾರಕ್ಕಾಗಿ ‘ಸಿಗ್ನಲ್‌ ಫ್ರೀ ರೋಟರಿ’ ಕಾಮಗಾರಿ 2022ರ ಜುಲೈನಲ್ಲಿ ಆರಂಭವಾಗಿದೆ. ಆದರೆ, ನಾಲ್ಕೈದು ಪಿಲ್ಲರ್‌ಗಳ ನಿರ್ಮಾಣದ ನಂತರ ಕಾಮಗಾರಿ ಸ್ಥಗಿತಗೊಂಡಿದೆ. ವಿಧಾನಸಭೆ ಚುನಾವಣೆಯ ನಂತರ ಕಾಮಗಾರಿ ಮುಂದುವರಿದಿಲ್ಲ.‌

‘ಸಿಗ್ನಲ್‌ ಫ್ರೀ ರೋಟರಿ’ ಕಾಮಗಾರಿ ಸ್ಥಗಿತದಿಂದ ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಪಿಲ್ಲರ್‌ಗಳು ತುಕ್ಕು ಹಿಡಿದಿವೆ. ತಡೆಗೋಡೆಯನ್ನು ಬೇಕಾಬಿಟ್ಟಿಯಾಗಿ ತೆರವು ಮಾಡಿದ್ದು, ಉಳಿದಿರುವ ರಸ್ತೆ ಗುಂಡಿಯಮವಾಗಿದ್ದು, ದೂಳು ಅತಿ ಹೆಚ್ಚಾಗಿದೆ. ಮೈಸೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹೆಚ್ಚಿನ ಸಮಯ ಹಸಿರು ಸಿಗ್ನಲ್‌ ನೀಡುವುದರಿಂದ ರಾಜರಾಜೇಶ್ವರಿನಗರದ ಕಡೆಯಿಂದ ಬರುವವರಿಗೆ, ಜ್ಞಾನಭಾರತಿ ಕಡೆಯಿಂದ ರಾಜರಾಜೇಶ್ವರಿನಗರದ ಕಡೆಗೆ ಹೋಗುವವರು ವಾಯುಮಾಲಿನ್ಯ ಹಾಗೂ ದೂಳಿನಲ್ಲೇ ಅಧಿಕ ಸಮಯ ನಿಲ್ಲಬೇಕಾಗಿದೆ.

‘ನಾಗರಿಕರ ಅನುಕೂಲಕ್ಕಾಗಿ ‘ಸಿಗ್ನಲ್‌ ಫ್ರೀ ರೋಟರಿ’ ಕಾಮಗಾರಿ ನಡೆಯಬೇಕಾಗಿತ್ತು. ಆದರೆ, ಎರಡು ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಜನರಿಗೆ ಅನನುಕೂಲವೇ ಹೆಚ್ಚಾಗಿದೆ. ಈ ಬಗ್ಗೆ ಎಂಜಿನಿಯರ್‌ಗಳನ್ನು ಕೇಳಿದರೆ, ಜನಪ್ರತಿನಿಧಿಗಳತ್ತ ಕೈತೋರುತ್ತಾರೆ. ಅವರು ಜನಸಾಮಾನ್ಯರ ಸಮಸ್ಯೆಯ ಕುರಿತು ಮಾತು ಕೇಳುವ ತಾಳ್ಮೆಯನ್ನು ಹೊಂದಿಲ್ಲ’ ಎಂದು ಹಲಗೆವಡೇರಹಳ್ಳಿಯ ರಾಮಚಂದ್ರ ದೂರಿದರು.

ಪ್ರಹ್ಲಾದ್‌ಗೆ ಡಿಸಿಎಂ ತರಾಟೆ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಮೇಲ್ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮೇಲ್ಸೇತುವೆ ಗ್ರೇಡ್‌ ಸೆಪರೇಟರ್‌ ವೈಟ್‌ ಟಾಪಿಂಗ್‌ ಕಾಮಗಾರಿಗಳು ಸೇರಿದಂತೆ ಬೃಹತ್‌ ಕಾಮಗಾರಿಗಳ ನಿರ್ವಹಣೆ ಜವಾಬ್ದಾರಿ ಹೊಂದಿರುವ ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ಅವರನ್ನು ತರಾಟೆಗೆ ತೆಗೆದುಕೊಂಡ ಡಿಸಿಎಂ ‘ಪ್ರಹ್ಲಾದ್ ಅವರಿಗೆ ಕಾರ್ಯ ಒತ್ತಡ ಹೆಚ್ಚಾಗಿದೆ. ಅವರ ಬಳಿ ಯೋಜನೆಗಳೂ ಅಧಿಕವಾಗಿವೆ. ಅವರಲ್ಲಿರುವ ಯೋಜನೆಗಳ ಉಸ್ತುವಾರಿಯನ್ನು ಬೇರೆಯವರಿಗೆ ನೀಡಿ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಸೂಚಿಸಿದರು’ ಎಂದು ಮೂಲಗಳು ತಿಳಿಸಿವೆ.

ಹೊಸಕೆರೆಹಳ್ಳಿ ಹಾಗೂ ರಾಜರಾಜೇಶ್ವರಿ ನಗರ ಮೇಲ್ಸೇತುವೆ ಕಾಮಗಾರಿಗಳು ವಿಳಂಬವಾಗುತ್ತಿರುವುದರ ಕುರಿತು ಮಾಹಿತಿಗಾಗಿ ಬಿ.ಎಸ್‌. ಪ್ರಹ್ಲಾದ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಪ್ರತಿಕ್ರಿಯಿಸಲಿಲ್ಲ. ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಯನ್ನೂ ಪ್ರಹ್ಲಾದ್‌ ಹೊಂದಿದ್ದು ನಗರದಲ್ಲಿ ನಾಲ್ಕೈದು ವರ್ಷಗಳಿಂದ ನಡೆಯುತ್ತಿರುವ ಏಳು ಮೇಲ್ಸೇತುವೆ ಕಾಮಗಾರಿಗಳ ಜವಾಬ್ದಾರಿಯನ್ನೂ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.