ADVERTISEMENT

ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 14:25 IST
Last Updated 18 ನವೆಂಬರ್ 2023, 14:25 IST
ಅವೆನ್ಯೂ ರಸ್ತೆ ಮೈಸೂರು ಬ್ಯಾಂಕ್ ಬಳಿಯ ಪಾದಚಾರಿ ಮಾರ್ಗದಲ್ಲಿದ್ದ ಪುಸ್ತಕ ವ್ಯಾಪಾರಿಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು
ಅವೆನ್ಯೂ ರಸ್ತೆ ಮೈಸೂರು ಬ್ಯಾಂಕ್ ಬಳಿಯ ಪಾದಚಾರಿ ಮಾರ್ಗದಲ್ಲಿದ್ದ ಪುಸ್ತಕ ವ್ಯಾಪಾರಿಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು   

ಬೆಂಗಳೂರು: ಬಿಬಿಎಂಪಿ ಪೂರ್ವ, ದಕ್ಷಿಣ ಹಾಗೂ ಪಶ್ಚಿಮ ವಲಯ ವ್ಯಾಪ್ತಿಯ ಪಾದಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ.

ಪೂರ್ವ ವಲಯದ ಇಂದಿರಾನಗರ 100 ಅಡಿ ರಸ್ತೆ ಮತ್ತು ಸಿಎಂಎಚ್ ರಸ್ತೆಯಲ್ಲಿ ಯೋಜನಾ ವಿಭಾಗದಿಂದ ಕೈಗೊಂಡಿರುವ ವೈಟ್ ಟಾಪಿಂಗ್ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವುಗೊಳಿಸಲಾಯಿತು. ಕೆಲವೆಡೆ ಹೋಟೆಲ್, ಕಾರ್ ಶೋರೂಮ್ ಮುಂಭಾಗ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾದ ಕಾಂಕ್ರೀಟ್‌ ರ‍್ಯಾಂಪ್  ತೆರವುಳಿಸಲಾಗಿದೆ. ಆಸ್ಪತ್ರೆಯ ಮುಂಭಾಗ ಸ್ಟೀಲ್ ರ‍್ಯಾಂಪ್ ಅಳವಡಿಸಿದ್ದು, ಅದನ್ನು ಅವಶ್ಯಕತೆಯಿರುವಾಗ ಮಾತ್ರ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.

ಪುಲಕೇಶಿನಗರದ ಬೋರ್ ಬ್ಯಾಂಕ್ ರಸ್ತೆಯ ಪಾದಚಾರಿ ಮಾರ್ಗದಲ್ಲಿದ್ದ ಹಳೆಯ ವಾಹನಗಳನ್ನುತೆರವುಗೊಳಿಸಲು ಸೂಚನೆ ನೀಡಿಲಾಗಿದೆ. ರಸ್ತೆ ಬದಿಯ ಭಗ್ನಾವಶೇಷಗಳನ್ನು ತೆರವುಗೊಳಿಸಲಾಯಿತು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ADVERTISEMENT

ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಚಿಕ್ಕಪೇಟೆಯ ಸಿದ್ದಯ್ಯ ರಸ್ತೆ ಪಾದಚಾರಿ ಮಾರ್ಗದಲ್ಲಿದ್ದ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡರೆ ದಂಡ ವಿಧಿಸಲಾಗುವುದು ಮಳಿಗೆ ಮಾಲೀಕರಿಗೆ ಎಂದು ಎಚ್ಚರಿಕೆ ನೀಡಲಾಗಿದೆ.

ಬಸವನಗುಡಿಯ ವಿದ್ಯಾಪೀಠ ವಾರ್ಡ್‌ನ ಸಿ.ಟಿ ಬೆಡ್ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿನ ತಳ್ಳುವ ಗಾಡಿ ಮಾರಾಟಗಾರರಿಗೆ ಬೇರಡೆ ತೆರಳಲು ಸೂಚಿಸಲಾಗಿದೆ. ಬುಟ್ಟಿಗಳು ಹಾಗೂ ಟೇಬಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಪಶ್ಚಿಮ ವಲಯದ ಗಾಂಧಿನಗರದ ಅವೆನ್ಯೂ ರಸ್ತೆ ಮೈಸೂರು ಬ್ಯಾಂಕ್ ಬಳಿಯ ಕೃಷ್ಣ ಬಿಲ್ಡಿಂಗ್ ಮುಂಭಾಗ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿರುವ ಪುಸ್ತಕಗಳು ಸೇರಿದಂತೆ ಇನ್ನಿತರ ವ್ಯಾಪಾರಿಗಳನ್ನು ತೆರವು ಮಾಡಲಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಳ್ಳದಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.