ಬೆಂಗಳೂರು: ಉತ್ತರ ಭಾರತದ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡದ ಸದಸ್ಯರೆಂದು ಹೇಳಿಕೊಂಡು ನಗರದ ಉದ್ಯಮಿಗೆ ಬೆದರಿಕೆ ಹಾಕಿ, ಹಣ ಸುಲಿಗೆ ಮಾಡಲು ಪ್ರಯತ್ನಿಸಿದ್ದ ನಾಲ್ವರನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮಾವಳ್ಳಿಯ ಮೊಹಮ್ಮದ್ ರಫೀಕ್, ಉತ್ತರ ಪ್ರದೇಶದ ಶಿಶುಪಾಲ್ ಸಿಂಗ್, ವಂಶ್ ಸಚ್‌ದೇವ್ ಹಾಗೂ ಅಮಿತ್ ಚೌಧರಿ ಬಂಧಿತರು.
ಆರೋಪಿಗಳಿಂದ ಒಂದು ಕಾರು, ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಉತ್ತರ ಪ್ರದೇಶದ ಮೂವರು ಆರೋಪಿಗಳನ್ನು ಮೊಹಮ್ಮದ್ ರಫೀಕ್ ನಗರಕ್ಕೆ ಕರೆಸಿಕೊಂಡು ನಗರದ ಉದ್ಯಮಿಗೆ ಬೆದರಿಕೆ ಹಾಕಿದ್ದ. ಉದ್ಯಮಿ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ಹೇಳಿದರು.
‘ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರೂ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ನೆಲಸಿದ್ದಾರೆ. ಪ್ಲೇವುಡ್ ವ್ಯಾಪಾರ ಮಾಡುತ್ತಿದ್ದಾರೆ. ಉದ್ಯಮಿಗೆ ಆರೋಪಿಗಳು ಕರೆ ಮಾಡಿ ಬೆದರಿಕೆ ಹಾಕಿದ್ದರು. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯರಾಗಿದ್ದು, ಒಂದು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ‘ಹಣ ಕೊಡದಿದ್ದರೆ ನಿನ್ನ ಮಗನನ್ನು ಅಪಹರಣ ಮಾಡುತ್ತೇವೆ’ ಎಂದು ಬೆದರಿಸಿದ್ದರು. ಈ ಸಂಬಂಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗಾಗಿ ಕೇಂದ್ರ ವಿಭಾಗ ಮತ್ತು ಸಿಸಿಬಿ ಒಳಗೊಂಡಂತೆ ಪ್ರತ್ಯೇಕ ತಂಡ ರಚಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಾಗ ಜೆ.ಸಿ.ರಸ್ತೆಯಲ್ಲಿ ಕಾರ್ ಸೌಂಡ್ಸ್ ಶಾಪ್‌ನಲ್ಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಮೊಹಮ್ಮದ್ ರಫೀಕ್ ಬೆದರಿಕೆ ಹಾಕಿದ್ದು ಪತ್ತೆಯಾಗಿತ್ತು. ಆತ ನೀಡಿದ ಸುಳಿವು ಆಧರಿಸಿ ಉತ್ತರ ಪ್ರದೇಶದ ಮೂವರನ್ನು ಬಂಧಿಸಲಾಯಿತು’ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.