ಬೆಂಗಳೂರು: ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚಿಸುತ್ತಿದ್ದ ಏಳು ಆರೋಪಿಗಳನ್ನು ಆಗ್ನೇಯ ವಿಭಾಗದ ಆಡುಗೋಡು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಜೆ.ಪಿ. ನಗರದ ಶಶಿಕುಮಾರ್ (25), ಮಂಡಿಮೊಹಲ್ಲಾದ ಸೈಯದ್ ಕಾಸಿಫ್ (31), ರಾಜೀವ್‌ನಗರದ ಮೊಹಮ್ಮದ್ ಮುದಾಸೀರ್(36), ಉದಯಗಿರಿಯ ಶಫಿ(38), ಇಮ್ತಿಯಾಜ್ ಪಾಷಾ(33), ಲಷ್ಕರ್ ಮೊಹಲ್ಲಾದ ಅಜರುದ್ದೀನ್(32) ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಸೈಯದ್ ದಾನೀಶ್(20) ಬಂಧಿತರು.
ವಂಚನೆ ನಡೆಸಿ ಎಲ್ಲರೂ ಮೈಸೂರಿನ ವಿವಿಧೆಡೆ ತಲೆಮರೆಸಿಕೊಂಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೊಹಮ್ಮದ್ ಕಾಶಿಫ್ ಎಂಬಾತನ ಸ್ನೇಹಿತನ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿದ್ದ ಆರೋಪಿಗಳು, ₹1.50 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದರು.
ಬಂಧಿತರಿಂದ ಒಂಬತ್ತು ಮೊಬೈಲ್ ಫೋನ್‌ಗಳು, 11 ಬ್ಯಾಂಕ್ ಪಾಸ್‌ಬುಕ್, ಆರು ಚೆಕ್ ಬುಕ್, 31 ಎಟಿಎಂ ಕಾರ್ಡ್, ಒಂಬತ್ತು ಆಧಾರ್ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ದೂರುದಾರ ಮೊಹಮ್ಮದ್ ಕಾಶಿಫ್‌ಗೆ ಜ.7ರಂದು ಅವರ ಸ್ನೇಹಿತರೊಬ್ಬರ ಹೆಸರು ಹಾಗೂ ಫೋಟೊ ಹೊಂದಿದ್ದ ಫೇಸ್‌ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದು ನಿಜವೆಂದು ನಂಬಿದ್ದ ಕಾಶಿಫ್, ಆ ರಿಕ್ವೆಸ್ಟ್ ಅನ್ನು ಸ್ವೀಕರಿಸಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಪ್ರೊಫೈಲ್‌ನಿಂದ, ‘ನಾನು ದುಬೈನಲ್ಲಿದ್ದು, ಕೆಲವೇ ದಿನಗಳಲ್ಲಿ ಭಾರತಕ್ಕೆ ಬರುತ್ತಿದ್ದೇನೆ. ನನ್ನ ಬಳಿಯಿರುವ ಅಪಾರ ಹಣವನ್ನು ಭಾರತಕ್ಕೆ ತೆಗೆದುಕೊಂಡು ಬಂದರೆ ಹೆಚ್ಚಿನ ತೆರಿಗೆ ಪಾವತಿಸಬೇಕು. ಆ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇನೆ. ನಾನು ಬೆಂಗಳೂರಿಗೆ ಬಂದಾಗ ಹಣ ಪಡೆಯುತ್ತೇನೆ’ ಎಂದು ಸಂದೇಶ ಕಳುಹಿಸಿದ್ದ. ಇದನ್ನು ನಂಬಿದ್ದ ಮೊಹಮ್ಮದ್ ಕಾಶಿಫ್, ತಮ್ಮ ಬ್ಯಾಂಕ್ ಖಾತೆಯ ವಿವಿರ ನೀಡಿದ್ದರು. ಬಳಿಕ ಬ್ಯಾಂಕ್ ಖಾತೆಗೆ ₹7.85 ಲಕ್ಷ ಹಣ ವರ್ಗಾಯಿಸಿದಂತೆ ನಕಲಿ ರಶೀದಿ ಕಳುಹಿಸಿದ್ದ ಸೈಬರ್ ವಂಚಕರು, ಮರುದಿನ ಹಣ ಬ್ಯಾಂಕ್ ಖಾತೆಗೆ ಜಮೆ ಆಗಲಿದೆಯೆಂದು ತಿಳಿಸಿದ್ದರು ಎಂದು ಮೂಲಗಳು ತಿಳಿಸಿವೆ.
‘ಮರುದಿನ ಮತ್ತೆ ಫೇಸ್‌ಬುಕ್ ಖಾತೆಯ ಮೂಲಕ ಆರೋಪಿಗಳ ಪೈಕಿ ಒಬ್ಬ ಸಂಪರ್ಕಿಸಿ, ತಾನು ಸೌದಿ ಅರೇಬಿಯಾದ ಪೊಲೀಸ್ ಠಾಣೆಯೊಂದರಲ್ಲಿ ತೊಂದರೆಗೆ ಸಿಲುಕಿದ್ದೇನೆ. ತುರ್ತಾಗಿ ₹1.95 ಲಕ್ಷ ಹಣ ಬೇಕಿದೆ ಎಂದು ತಿಳಿಸಿದ್ದ. ಹಣವನ್ನು ಏಜೆಂಟ್‌ಗೆ ಕಳುಹಿಸುವಂತೆ ಸೂಚಿಸಿದ್ದ. ಮಾತು ನಂಬಿದ್ದ ದೂರುದಾರರು, ₹5 ಸಾವಿರ ಹಣ ವರ್ಗಾವಣೆ ಮಾಡಿದ್ದರು. ಆರೋಪಿಗಳು ತಿಳಿಸಿದ್ದ ನಂಬರ್‌ಗೆ ಹಂತ ಹಂತವಾಗಿ ₹1.50 ಲಕ್ಷ ಹಣ ವರ್ಗಾಯಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಯಾವುದೇ ಹಣ ವಾಪಸ್ ಬಾರದ ಕಾರಣ ದೂರು ನೀಡಿದ್ದರು. ತಾಂತ್ರಿಕ ಸಾಕ್ಷ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
ತನಿಖೆ ವೇಳೆ ಮೈಸೂರಿನ ಬ್ಯಾಂಕ್‌ವೊಂದರ ಖಾತೆಗೆ ಹಣ ವರ್ಗಾವಣೆ ಆಗಿರುವುದು ಗೊತ್ತಾಗಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತುಸಾರಾ ಫಾತಿಮಾ ಡಿಸಿಪಿ ಆಗ್ನೇಯ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.