ADVERTISEMENT

ಆನ್‌ಲೈನ್ ವರನ ವಿರುದ್ಧ ಮತ್ತೊಂದು ಎಫ್‌ಐಆರ್‌

ವಿಚ್ಛೇದನ ಪಡೆದ ಮಹಿಳೆಯಿಂದ ಗಿರಿನಗರ ಠಾಣೆಗೆ ದೂರು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 22:35 IST
Last Updated 15 ಮಾರ್ಚ್ 2020, 22:35 IST
ಮಂಜುನಾಥ್
ಮಂಜುನಾಥ್   

ಬೆಂಗಳೂರು:ವೈವಾಹಿಕ ಜಾಲತಾಣ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಮದುವೆ ಆಮಿಷವೊಡ್ಡಿ ವಂಚಿಸುತ್ತಿದ್ದ ಆರೋಪದಡಿ ಯಲಹಂಕ ಪೊಲೀಸರು ಬಂಧಿಸಿರುವ ಮಂಜುನಾಥ್ (34) ಎಂಬಾತನ ವಿರುದ್ಧ ಗಿರಿನಗರ ಠಾಣೆಯಲ್ಲೂ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

‘ಮದುವೆಯಾಗುವುದಾಗಿ ಆಮಿಷವೊಡ್ಡಿದ್ದ ಮಂಜುನಾಥ್ ಅಲಿಯಾಸ್ ರಾಹುಲ್, ₹ 6 ಲಕ್ಷ ಹಣ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ವಿಚ್ಛೇದನ ಪಡೆದಿರುವ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಯಲಹಂಕ ಪೊಲೀಸರ ಕಸ್ಟಡಿಯಲ್ಲಿರುವ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಗಿರಿನಗರ ಠಾಣೆ ಪೊಲೀಸರು ಹೇಳಿದರು.

‘ಕುಟುಂಬದವರ ನಿಶ್ಚಯದಂತೆ 2000ರಲ್ಲಿ ಮದುವೆಯಾಗಿದ್ದ ಮಹಿಳೆಗೆ ಅಂಗವಿಕಲ ಮಗು ಜನಿಸಿತ್ತು. ಅದೇ ಕಾರಣಕ್ಕೆ ಪತಿ ಅವರನ್ನು ಬಿಟ್ಟು ಬೇರೆ ಮದುವೆ ಆಗಿದ್ದರು. ನೊಂದ ಮಹಿಳೆ ವಿಚ್ಛೇದನ ಪಡೆದಿದ್ದರು. ತಾಯಿಯ ಒತ್ತಾಸೆಯಂತೆ ಎರಡನೇ ಮದುವೆಯಾಗಲು ವರನನ್ನು ಹುಡುಕಲಾರಂಭಿಸಿದ್ದರು. ಅದಕ್ಕೆಂದೇ ‘ಮ್ಯಾಟ್ರಿಮೋನಿ ಡಾಟ್‌ ಕಾಮ್‌’ ಜಾಲತಾಣದಲ್ಲಿ ಖಾತೆ ತೆರೆದಿದ್ದರು’

ADVERTISEMENT

‘ರಾಮನಗರ ಜಿಲ್ಲೆಯ ಮಾಯಗಾನಹಳ್ಳಿಯ ಆರೋಪಿ ಮಂಜುನಾಥ್, ಜಾಲತಾಣದಲ್ಲಿ ರಾಹುಲ್ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ. ಮಹಿಳೆಯನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿದ್ದ. ನಂತರ ಇಬ್ಬರೂ ಮೊಬೈಲ್ ನಂಬರ್ ಬದಲಾಯಿಸಿಕೊಂಡು ಮಾತನಾಡಲಾರಂಭಿಸಿದ್ದರು.’

‘ಸ್ಟೇಷನರಿ ಅಂಗಡಿ ಹೊಂದಿದ್ದ ಮಹಿಳೆ, ಗ್ರಾಫಿಕ್ಸ್ ಡಿಸೈನ್ ಮಳಿಗೆ ತೆರೆಯಬೇಕೆಂದು ಆರೋಪಿಗೆ ಹೇಳಿದ್ದರು. ಬ್ಯಾಂಕ್‌ನಿಂದ ₹ 70 ಲಕ್ಷ ಸಾಲ ಕೊಡಿಸುವುದಾಗಿ ಹೇಳಿದ್ದ ಆರೋಪಿ, ಅದಕ್ಕೆ ಶುಲ್ಕವೆಂದು ₹ 6 ಲಕ್ಷ ಮುಂಗಡವಾಗಿ ಪಡೆದಿದ್ದ. ನಂತರ, ಸಾಲವನ್ನೂ ಕೊಡಿಸದೇ ಮದುವೆಯನ್ನೂ ಆಗದೆ ವಂಚಿಸಿರುವುದಾಗಿ ಮಹಿಳೆ ದೂರುತ್ತಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.