ADVERTISEMENT

ಭರವಸೆಯಲ್ಲೇ ಉಳಿದ ‘ಉಚಿತ ನೀರು’

ವರ್ಷ ಕಳೆದ ಬಳಿಕವೂ ಅನುಷ್ಠಾನಗೊಳ್ಳದ 2020–21ನೇ ಸಾಲಿನ ಬಜೆಟ್‌ ಘೋಷಣೆಗಳು

ಪ್ರವೀಣ ಕುಮಾರ್ ಪಿ.ವಿ.
Published 29 ಮಾರ್ಚ್ 2021, 19:02 IST
Last Updated 29 ಮಾರ್ಚ್ 2021, 19:02 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ‘ನಗರದ 2.5 ಲಕ್ಷ ಮನೆಗಳಿಗೆ ತಿಂಗಳಿಗೆ 10 ಸಾವಿರ ಲೀಟರ್‌ ನೀರನ್ನು ಉಚಿತವಾಗಿ ಪೂರೈಕೆ ಮಾಡಲಾಗುತ್ತದೆ...’

ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತವಿದ್ದಾಗ ಮಂಡಿಸಿದ್ದ 2020–21ನೇ ಸಾಲಿನ ಬಜೆಟ್‌ನಲ್ಲಿ ನೀಡಿದ್ದ ಈ ಭರವಸೆ ವರ್ಷ ಕಳೆದರೂ ಈಡೇರಿಲ್ಲ.

‘ಇದುವರೆಗೆ ಯಾವೆಲ್ಲ ಮನೆಗಳಲ್ಲಿ ತಿಂಗಳಿಗೆ 10 ಸಾವಿರ ಲೀಟರ್‌ಗಿಂತ ಕಡಿಮೆ ನೀರು ಪೂರೈಕೆಯಾಗುತ್ತಿತ್ತೋ ಅಂತಹ 2.5 ಲಕ್ಷ ಕುಟುಂಬಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡಕುಟುಂಬಗಳಿಗೂ ಇದರಿಂದ ನೆರವಾಗಲಿದೆ’ ಎಂದು ಆಗಿನ ಮೇಯರ್‌ ಗೌತಮ್‌ ಕುಮಾರ್‌ ಅವರು ಬಜೆಟ್‌ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದರು.

ADVERTISEMENT

‘ಪ್ರತಿ ಮನೆಗೆ ಉಚಿತ ನೀರು ಪೂರೈಕೆಗೆ ತಿಂಗಳಿಗೆ ₹ 150 ವೆಚ್ಚವಾಗಲಿದೆ. ಈ ಯೋಜನೆಗೆ ₹ 43 ಕೋಟಿ ಕಾಯ್ದಿರಿಸಲಾಗಿದೆ. ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾದ 110 ವಾರ್ಡ್‌ಗಳ ಮನೆಗಳಿಗೂ ಇದರ ಪ್ರಯೋಜನ ಸಿಗಲಿದೆ. ತಿಂಗಳಿಗೆ 10 ಸಾವಿರ ಲೀಟರ್‌ಗಿಂತ ಹೆಚ್ಚು ನೀರು ಬಳಸಿದರೆ ಸಂಪೂರ್ಣ ಬಿಲ್‌ ಅನ್ನು ಆ ಕುಟುಂಬವೇ ಪಾವತಿಸಬೇಕು. ಈ ಕಾರ್ಯಕ್ರಮ ನೀರಿನ ಮಿತವ್ಯಯವನ್ನು ಉತ್ತೇಜಿಸಲಿದೆ’ ಎಂದೂ ಹೇಳಿದ್ದರು.

‘ಕುಡಿಯುವ ನೀರು ಸರಬರಾಜು ವ್ಯವಸ್ಥೆಗಾಗಿ ಕಾಮಗಾರಿಗಳಿಗೆ ಲೆಕ್ಕಶೀರ್ಷಿಕೆ ಪಿ–1802ರ ಅಡಿ ₹ 50 ಕೋಟಿ ವೆಚ್ಚಕ್ಕೆ ಅನುವು ಮಾಡಿಕೊಡಲಾಗಿದೆ. ಈ ಪೈಕಿ ₹ 13.45 ಕೋಟಿ ವೆಚ್ಚದ ಕಾಮಗಾರಿಗಳಿಗೆ ಜಾಬ್‌ಕೋಡ್‌ಗಳನ್ನು ನೀಡಲಾಗಿದೆ. ಕಾಮಗಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ’ ಎಂದು 2020–21ನೇ ಸಾಲಿನ ಬಜೆಟ್‌ ಕಾರ್ಯನಿರ್ವಹಣಾ ವರದಿಯಲ್ಲಿ ಹೇಳಲಾಗಿದೆ. ಆದರೆ, ಅದರಲ್ಲಿ ಉಚಿತ ನೀರು ಪೂರೈಕೆ ಬಗ್ಗೆ ಉಲ್ಲೇಖವಿಲ್ಲ. ಇದುವರೆಗೂ ತಿಂಗಳಿಗೆ 10 ಸಾವಿರ ಲೀಟರ್‌ಗಳಿಗಿಂತ ಕಡಿಮೆ ನೀರು ಬಳಸುವ ಯಾವುದೇ ಮನೆಗೂ ಉಚಿತ ನೀರು ಇನ್ನೂ ಸಿಕ್ಕಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಈ ಹಿಂದಿನ ಮೇಯರ್‌ ಗೌತಮ್‌ ಕುಮಾರ್‌ ಅವರಿಗೆ ಕರೆ ಮಾಡಲಾಯಿತಾದರೂ ಅವರು ಕರೆ ಸ್ವೀಕರಿಸಲಿಲ್ಲ.

ಪಾಲಿಕೆ ಆಯುಕ್ತ ಎನ್‌.ಮಂಜುನಾಥಪ್ರಸಾದ್‌, ‘ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ’ ಎಂದು ತಿಳಿಸಿದರು.

ಪುಸ್ತಕದಲ್ಲೇ ಉಳಿದ ಬಜೆಟ್‌ ಘೋಷಣೆಗಳು

ಬಿಬಿಎಂಪಿಯ 2020–21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ ಅನೇಕ ಕಾರ್ಯಕ್ರಮಗಳೂ ಅನುಷ್ಠಾನ ಗೊಂಡಿಲ್ಲ. ನಾಡಪ್ರಭು ಕೆಂಪೇಗೌಡದ ಹಸರಿನಲ್ಲಿ ಎಂಟು ಕಡೆ ಸ್ವಾಗತ ಕಮಾನುಗಳ ನಿರ್ಮಾಣ ಮಾಡುವುದಾಗಿ ಬಜೆಟ್‌ನಲ್ಲಿ ಹೇಳಲಾಗಿತ್ತು. ಇದರ ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಕಾರ್ಯನಿರ್ವಹಣಾ ವರದಿಯಲ್ಲೂ ಉಲ್ಲೇಖವಿಲ್ಲ.

ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌, ಉಚಿತ ಲ್ಯಾಪ್‌ಟಾಪ್‌ ವಿತರಣೆಯಂತಹ ಜನಪ್ರಿಯ ಯೋಜನೆಗಳನ್ನು 2020–21ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

ಕೋವಿಡ್‌ ಕಾರಣದಿಂದ ಶಾಲಾ ಕಾಲೇಜು ಪ್ರಾರಂಭವಾಗದ ಕಾರಣ ಉಚಿತ ಬಸ್‌ಪಾಸ್‌ಗೆ ಮೀಸಲಿಟ್ಟ ಅನುದಾನ ಬಳಕೆಯಾಗಿಲ್ಲ ಎಂದು ಕಾರ್ಯನಿರ್ವಹಣಾ ವರದಿಯಲ್ಲಿ ಹೇಳಲಾಗಿದೆ. ಉಚಿತ ಬಸ್‌ ಪಾಸ್‌ಗೆ 2021–22ನೇ ಸಾಲಿನ ಬಜೆಟ್‌ನಲ್ಲಿ ಮತ್ತೆ ₹ 75 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ.

ಬಡವಿದ್ಯಾರ್ಥಿಗಳಿಗೆ ದಿವಂಗತ ಅನಂತ ಕುಮಾರ್ ಹೆಸರಿನಲ್ಲಿ ಉಚಿತ ಲ್ಯಾಪ್‌ಟಾಪ್‌ ವಿತರಣೆಗೆ ₹ 15 ಕೋಟಿ ಕಾಯ್ದಿರಿಸಲಾಗಿತ್ತು. ಪ್ರತಿ ವಾರ್ಡ್‌ಗೆ 15 ಲ್ಯಾಪ್‌ಟಾಪ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿತ್ತು. ಈ ಅನುದಾನ ಇನ್ನೂ ಬಳಕೆಯಾಗಿಲ್ಲ. ಇದರ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಾರ್ಯನಿರ್ವಹಣಾ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.