
ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನ್ನು (ಫ್ರೀಡಂ ಪಾರ್ಕ್) ಸಮಗ್ರವಾಗಿ ಅಭಿವೃದ್ಧಿಪಡಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸ್ವಾತಂತ್ರ್ಯ ಉದ್ಯಾನಕ್ಕೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ‘ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ವಾಯುವಿಹಾರಿಗಳ ನಡಿಗೆಗೆ ಸುಗಮ ಮಾರ್ಗ, ಭದ್ರತಾ ವ್ಯವಸ್ಥೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.
ವಾಯುವಿಹಾರಕ್ಕೆ ಬರುವ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳ ನಡಿಗೆಗೆ ಸುಗಮ ಮಾರ್ಗ ಇರಬೇಕು. ಆಟದ ಉಪಕರಣಗಳೊಂದಿಗೆ ‘ಕಿಡ್ಸ್ ಪಾರ್ಕ್’ ನಿರ್ಮಿಸಬೇಕು. ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಪೋಷಣೆಗೆ ಕ್ರಮ ವಹಿಸಬೇಕು, ಒಣಗಿದ ಹಾಗೂ ಅಪಾಯಕಾರಿ ಮರ– ರೆಂಬೆ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.
ಉದ್ಯಾನದ ಪಕ್ಕದಲ್ಲಿರುವ ಬಹುಮಹಡಿ ವಾಹನ ನಿಲುಗಡೆ ಸ್ಥಳವನ್ನು ಪರಿಶೀಲಿಸಿದ ಅವರು, ಈ ಕಟ್ಟಡದ ಮೇಲ್ಭಾಗದಲ್ಲಿರುವ ಜಾಗವನ್ನು, ವಸ್ತು ಪ್ರದರ್ಶನ ಮತ್ತು ಮಾರಾಟ ಹಾಗೂ ಇನ್ನಿತರ ವಾಣಿಜ್ಯ ಉದ್ದೇಶಗಳಿಗೆ ನೀಡಿ, ಆದಾಯ ಬರುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಉದ್ಯಾನದ ಅಕ್ಕ ಪಕ್ಕದಲ್ಲಿನ ರಸ್ತೆಬದಿಯಲ್ಲಿ ಎಳೆನೀರು ಮಾರಾಟ ಮಾಡುತ್ತಿರುವವರು ತೆಂಗಿನ ಚಿಪ್ಪುಗಳನ್ನು ಅಲ್ಲಿಯೇ ಬಿಡದೆ, ವಿಲೇವಾರಿ ಮಾಡಬೇಕು. ಪಾದಚಾರಿ ಮಾರ್ಗಗಳನ್ನು ಸ್ವಚ್ಛವಾಗಿ ನಿರ್ವಹಿಸಬೇಕು ಎಂದರು.
ಹೆಚ್ಚುವರಿ ಆಯುಕ್ತ (ಅಭಿವೃದ್ಧಿ) ದಲ್ಜಿತ್ ಕುಮಾರ್, ಜಂಟಿ ಆಯುಕ್ತರಾದ ರಂಗನಾಥ್, ಹೇಮಂತ್ ಶರಣ್, ಮುಖ್ಯ ಎಂಜಿನಿಯರ್‌ಗಳಾದ ವಿಜಯ್‌ಕುಮಾರ್ ಹರಿದಾಸ್ ಮತ್ತು ಸುಗುಣಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.