
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಲ್ಲಿ ನೊಂದವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಾಹಿತಿಗಳು ಹಾಗೂ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಶುಕ್ರವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.
‘ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಹತ್ತಾರು ವರ್ಷಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ‘ಕೊಂದವರು ಯಾರು?’ ಎಂಬ ಸತ್ಯವನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಕರ್ನಾಟಕ ರಾಜ್ಯೋತ್ಸವ ದಿನದಂದು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದೇವೆ’ ಎಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದವರು ಹೇಳಿದರು.
ಎಲ್ಲ ಪ್ರಕರಣಗಳ ತನಿಖೆಯನ್ನೂ ಸಂಪೂರ್ಣಗೊಳಿಸುವ ತನಕ ಎಸ್ಐಟಿ ತನಿಖೆಯನ್ನು ಸರ್ಕಾರ ಸ್ಥಗಿತಗೊಳಿಸಬಾರದು ಎಂದು ಸಾಹಿತಿಗಳು ಹಾಗೂ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಆಗ್ರಹಿಸಿದರು.
‘ಸಾಕ್ಷಿಗಳು ಮತ್ತು ದೂರುದಾರರಿಗೆ ಭಯವಿಲ್ಲದೆ ತನಿಖೆಗೆ ಸಹಕರಿಸಲು ಎಸ್‌ಐಟಿ ಭದ್ರತೆ ಕಲ್ಪಿಸಬೇಕು. ತನಿಖೆಯಲ್ಲಿ ಗೋಪ್ಯತೆ ಕಾಪಾಡಬೇಕು. ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರವು ರಕ್ಷಣೆ ಮತ್ತು ಪರಿಹಾರ ಕಲ್ಪಿಸಬೇಕು. ಹೈಕೋರ್ಟ್ ತೀರ್ಪಿನಂತೆ ಸೌಜನ್ಯ ಪ್ರಕರಣದಲ್ಲಿ ತನಿಖೆ ನಡೆಸುವಾಗ ಗಂಭೀರ ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಜಾತಿ, ವರ್ಗ, ಮತ ಮತ್ತು ರಾಜಕೀಯ ಪ್ರಾಬಲ್ಯ ಬಳಸಿಕೊಂಡು ಸತ್ಯವನ್ನು ಹತ್ತಿಕ್ಕಲು ಅಥವಾ ತನಿಖೆಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು’ ಒತ್ತಾಯಿಸಿದರು.
ಅಭಿಯಾನದಲ್ಲಿ ಡಾ. ವಸುಂಧರಾ ಭೂಪತಿ, ದು.ಸರಸ್ವತಿ, ಇಂದಿರಾ ಕೃಷ್ಣಪ್ಪ, ಕೆ.ಷರೀಫಾ, ಎನ್.ಗಾಯತ್ರಿ, ಚಂಪಾವತಿ, ಗೌರಮ್ಮ, ಮೀನಾಕ್ಷಿ, ಇಂದ್ರಮ್ಮ, ಜ್ಯೋತಿ ಎ., ಕೆ.ಎಸ್.ವಿಮಲಾ, ಶಾಂತಮ್ಮ, ಮಧು ಭೂಷಣ್, ಮಮತಾ ಯಜಮಾನ್, ಗೌರಿ, ಗೀತಾ ಸಾಧನಾ, ವೀಣಾ ಹರಿಗೋವಿಂದ್, ಮಲ್ಲಿಗೆ ಸಿರಿಮನೆ, ಸುಷ್ಮಾ ವರ್ಮಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.