ಬೆಂಗಳೂರು: ಗಣೇಶ ಹಬ್ಬದ ದಿನ ಆಗಸ್ಟ್ 27ರಿಂದ 31ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 5.91 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.
41 ಕೆರೆಗಳ ಅಂಗಳದಲ್ಲಿ ಶಾಶ್ವತ/ ತಾತ್ಕಾಲಿಕ ಕಲ್ಯಾಣಿ, 489 ಸಂಚಾರಿ ಟ್ಯಾಂಕರ್‌ಗಳಲ್ಲಿ ಬಿಬಿಎಂಪಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಿತ್ತು.
ಕಲ್ಯಾಣಿಗಳ ಆವರಣದಲ್ಲಿ ವ್ಯವಸ್ಥಿತವಾಗಿ ಬ್ಯಾರಿಕೇಡ್ ಅಳವಡಿಕೆ, ನುರಿತ ಈಜುಗಾರರ/ ಜೀವ ರಕ್ಷಕರ ನಿಯೋಜನೆ, ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ವಿದ್ಯುತ್ ದೀಪಗಳ ಸೌಲಭ್ಯ ಹಾಗೂ ಪೆಂಡಾಲ್ ವ್ಯವಸ್ಥೆ ಮಾಡಿಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪ್ರಮುಖ ಕಲ್ಯಾಣಿಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಕಲ್ಯಾಣಿಗಳ ಬಳಿ ಮೂರ್ತಿಗಳ ವಿಸರ್ಜನೆ ಮಾಡಿದ ವೇಳೆ ಸಂಗ್ರಹವಾಗುವ ತ್ಯಾಜ್ಯವನ್ನು ಆಟೊ ಟಿಪ್ಪರ್‌ಗಳ ಮೂಲಕ ವಿಲೇವಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಸ್ವಚ್ಛತೆ ಕಾರ್ಯ: ಹಲಸೂರು, ಹೆಬ್ಬಾಳ, ಯಡಿಯೂರು, ಸ್ಯಾಂಕಿ ಕೆರೆ ಅಂಗಳದ ಕಲ್ಯಾಣಿಗಳಲ್ಲಿ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದು, ಆ ಕಲ್ಯಾಣಿಗಳಲ್ಲಿ ಹೂಳೆತ್ತುವ ಕಾರ್ಯ ನಡೆಯಲಿದೆ. ಯಡಿಯೂರು ಕೆರೆ ಕಲ್ಯಾಣಿಯಲ್ಲಿ ಸೆ.10ರಂದು, ಹೆಬ್ಬಾಳ ಕೆರೆ ಮತ್ತು ಹಲಸೂರು ಕೆರೆ ಕಲ್ಯಾಣಿಯಲ್ಲಿ ಸೆ.2ರಂದು ಹೂಳೆತ್ತಲಾಗುತ್ತದೆ. ಈ ಸಂದರ್ಭದಲ್ಲಿ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
3,320 ಪಿಒಪಿ ಮೂರ್ತಿ: ‘ಯಡಿಯೂರು ಕೆರೆಯಲ್ಲಿ ನಿರ್ಮಿಸಿರುವ ಕಲ್ಯಾಣಿಯಲ್ಲಿ ಐದು ದಿನಗಳಲ್ಲಿ 2.28 ಲಕ್ಷ ಮಣ್ಣಿನ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಇದಲ್ಲದೆ, 6,550 ಪೇಪರ್ ಮೂರ್ತಿ ಹಾಗೂ 3,320 ಪಿಒಪಿ ಮೂರ್ತಿಗಳ ವಿಸರ್ಜನೆಯಾಗಿವೆ’ ಎಂದು ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ತಿಳಿಸಿದ್ದಾರೆ.
ಮೂರ್ತಿಗಳ ವಿಸರ್ಜನೆ ಅಂಕಿ–ಅಂಶ
ಆಗಸ್ಟ್ 27ರಂದು; 219153 28ರಂದು;73959 29ರಂದು;114402 30ರಂದು;54653 31ರಂದು;129516 ಒಟ್ಟು;591683
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.