ADVERTISEMENT

ವಾರ್ಡ್‌ಗೆ ಒಂದೇ ಗಣೇಶ: ನಿರ್ಬಂಧ ಹಿಂತೆಗೆಯುವಂತೆ ಬಿಬಿಎಂಪಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 9:08 IST
Last Updated 9 ಸೆಪ್ಟೆಂಬರ್ 2021, 9:08 IST
ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಮತ್ತು ಇತರೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು.
ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಮತ್ತು ಇತರೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು.   

ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧಗಳನ್ನು ಹೇರಿರುವ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಕ್ರಮ ಖಂಡಿಸಿ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಮತ್ತು ಇತರೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಿಬಿಎಂಪಿ ಕೇಂದ್ರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

‘ವಾರ್ಡ್‌ಗೆ ಒಂದೇ ಗಣೇಶ ಮೂರ್ತಿ ಸ್ಥಾಪನೆ ಮಾಡಬೇಕು, ನಾಲ್ಕು ಅಡಿಗಿಂತ ಎತ್ತರ ಇರಬಾರದು, ಮೂರು ದಿನ ಮಾತ್ರ ಉತ್ಸವ ನಡೆಯಬೇಕು ಎಂಬ ಷರತ್ತುಗಳನ್ನು ವಿಧಿಸುವ ಮೂಲಕ ಹಬ್ಬದ ಆಚರಣೆಗೆ ಅಡ್ಡಿ ಮಾಡಲಾಗುತ್ತಿದೆ. ಈ ನಿರ್ಬಂಧಗಳನ್ನು ಹಿಂದಕ್ಕೆ ಪಡೆಯಬೇಕು’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ರಾಜು ಒತ್ತಾಯಿಸಿದರು.

‘12 ಅಡಿ ಎತ್ತರದವರೆಗಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಬೇಕು ಮತ್ತು ಕನಿಷ್ಠ ಐದು ದಿನಗಳವರೆಗಾದರೂ ಉತ್ಸವ ನಡೆಸಲು ಅವಕಾಶ ನೀಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

‘ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ ನಾವೇ ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದೆವು. ಆದರೆ, ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಆದರೂ ಅನೇಕ ಷರತ್ತುಗಳನ್ನು ವಿಧಿಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ವಿವಿಧ ಗಣೇಶೋತ್ಸವ ಸಮಿತಿಗಳು, ಬಿಬಿಎಂಪಿ ಕೇಂದ್ರ ಕಚೇರಿಯ ಆವರಣಕ್ಕೇ ಗಣೇಶ ಮೂರ್ತಿಗಳನ್ನು ತಂದು ಪ್ರತಿಭಟನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.