ADVERTISEMENT

ರೈಲಿನಲ್ಲಿ ಡ್ರಗ್ಸ್ ಸಾಗಣೆ; 40 ಕೆ.ಜಿ ಗಾಂಜಾ ಜಪ್ತಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 19:11 IST
Last Updated 1 ಅಕ್ಟೋಬರ್ 2020, 19:11 IST
ಜಪ್ತಿ ಮಾಡಿದ ಗಾಂಜಾ, ಆಟೊ ದ್ವಿಚಕ್ರ ವಾಹನ ಜೊತೆ ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ಶ್ರೀರಾಮಪುರ ಪೊಲೀಸರ ತಂಡ
ಜಪ್ತಿ ಮಾಡಿದ ಗಾಂಜಾ, ಆಟೊ ದ್ವಿಚಕ್ರ ವಾಹನ ಜೊತೆ ಆರೋಪಿಗಳು ಹಾಗೂ ಅವರನ್ನು ಬಂಧಿಸಿದ ಶ್ರೀರಾಮಪುರ ಪೊಲೀಸರ ತಂಡ   

ಬೆಂಗಳೂರು: ರೈಲಿನಲ್ಲಿ ಗಾಂಜಾ ಸಾಗಣೆ ಮಾಡಿಕೊಂಡು ಬಂದು ನಗರದಲ್ಲಿ ಮಾರುತ್ತಿದ್ದ ಆರೋಪದಡಿ ಮೂವರನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದಾರೆ.

‘ಲಿಂಗರಾಜಪುರದ ಕಾರ್ತಿಕ್ ಅಲಿಯಾಸ್ ಕಬಾಲಿ (31), ಕೋರಮಂಗಲದ ವಿಕ್ಕಿ (23) ಮತ್ತು ಕೂಡ್ಲು ಬಳಿಯ ವಿನಾಯಕ ನಗರದ ಪ್ರೇಮ್‌ಕುಮಾರ್ (21) ಬಂಧಿತರು. ಅವರಿಂದ 40 ಕೆ.ಜಿ. ಗಾಂಜಾ, 2 ದ್ವಿಚಕ್ರ ವಾಹನ, ಆಟೊ ಜಪ್ತಿ ಮಾಡಲಾಗಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

‘ಒಡಿಶಾದಲ್ಲಿ ಗಾಂಜಾ ಖರೀದಿ ಮಾಡುತ್ತಿದ್ದ ಆರೋಪಿಗಳು, ಅಲ್ಲಿಂದಲೇ ರೈಲಿನಲ್ಲಿ ನಗರಕ್ಕೆ ತರುತ್ತಿದ್ದರು. ಸುಬ್ರಹ್ಮಣ್ಯನಗರ, ಶ್ರೀರಾಮಪುರ, ರಾಜಾಜಿನಗರ, ಶೇಷಾದ್ರಿಪುರ, ಬಸವೇಶ್ವರನಗರ ಹಾಗೂ ಸುತ್ತಮುತ್ತ ಆಟೊದಲ್ಲಿ ಸುತ್ತಾಡಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು.’

ADVERTISEMENT

‘ಸೆ. 29ರಂದು ಸಂಜೆ 5.30ರ ಸುಮಾರಿಗೆ ಯಶವಂತಪುರದ ರೈಲ್ವೆ ಹಳಿ ಪಕ್ಕದಲ್ಲಿ ಆಟೊ ನಿಲ್ಲಿಸಿ ಆರೋಪಿಗಳು ಗಾಂಜಾ ಮಾಡುತ್ತಿದ್ದರು. ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ. ನಂತರ, ಮನೆಗಳ ಮೇಲೂ ದಾಳಿ ಮಾಡಿ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

‘ಆರೋಪಿ ಕಾರ್ತಿಕ್, ಕಬ್ಬಿಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ವಿಕ್ಕಿ, ಕೋರಮಂಗಲದ ಪಬ್‌ವೊಂದರಲ್ಲಿ ಡಿ.ಜೆ ಆಗಿದ್ದ. ಮತ್ತೊಬ್ಬ ಆರೋಪಿ ಪ್ರೇಮ್ ಕುಮಾರ್, ಡೆಲಿವರಿ ಬಾಯ್‌ ಆಗಿದ್ದ. 2019ರಲ್ಲೇ ಕಾರ್ತಿಕ್ ಗಾಂಜಾ ಮಾರಾಟ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, ಜೈಲಿಗೂ ಹೋಗಿ ಬಂದಿದ್ದ. ಸಹಚರರ ಜೊತೆ ಸೇರಿ ಗಾಂಜಾ ಮಾರಾಟ ಮುಂದುವರಿಸಿದ್ದ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.