ADVERTISEMENT

GBA ವ್ಯಾಪ್ತಿಯ ಅನಧಿಕೃತ ಕಟ್ಟಡಗಳ ತೆರವಿಗೆ ತಂಡ: ಮುಖ್ಯ ಆಯುಕ್ತ ಮಹೇಶ್ವರ್ ರಾವ್

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 1:33 IST
Last Updated 14 ಜನವರಿ 2026, 1:33 IST
ಮಹೇಶ್ವರ್ ರಾವ್‌
ಮಹೇಶ್ವರ್ ರಾವ್‌   

ಬೆಂಗಳೂರು: ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಿ, ತಂಡಗಳನ್ನು ರಚಿಸಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಿದ ನಂತರ ನಿಯಮಾನುಸಾರ ತೆರವು ಆದೇಶ ಹೊರಡಿಸಲು ಸೂಚಿಸಿದರು.

ಅನಧಿಕೃತ ಕಟ್ಟಡಗಳ ಪರಿಶೀಲನೆ ನಡೆಸಿ, ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿದ್ದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು. ಈ ಸಂಬಂಧ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳನ್ನು ಒಳಗೊಂಡ ತಂಡಗಳನ್ನು ರಚಿಸಬೇಕು ಎಂದರು.

ADVERTISEMENT

ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಾಣವಾಗುತ್ತಿರುವ ಕಟ್ಟಡಗಳನ್ನು ಮೊಹರು ಮಾಡಬೇಕು. ಕಟ್ಟಡ ನಿರ್ಮಾಣದ ಪ್ರಾರಂಭದಲ್ಲೇ ನಿಯಮ ಉಲ್ಲಂಘನೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ,  ಶಿಸ್ತು ಕ್ರಮಗಳನ್ನು ಕೈಗೊಂಡು ಅನಧಿಕೃತ ಕಟ್ಟಡ ನಿರ್ಮಾಣವನ್ನು ತಡೆಯಬೇಕು. ಕಟ್ಟಡ ನಿರ್ಮಾಣದಿಂದ ರಸ್ತೆ ಬದಿಯಲ್ಲಿ ರಾಶಿಯಾಗುವ ಭಗ್ನಾವಶೇಷಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 10 ವಿಧಾನಸಭಾ ಕ್ಷೇತ್ರಗಳು ಹಾಗೂ 21 ಉಪ ವಿಭಾಗಗಳಿದ್ದು, ಸುಮಾರು 6 ಲಕ್ಷ ಆಸ್ತಿಗಳಿವೆ. ₹1,281 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದ್ದು, ಇದುವರೆಗೆ ₹733 ಕೋಟಿ ಸಂಗ್ರಹಿಸಲಾಗಿದೆ. ಬಾಕಿ ಆಸ್ತಿ ತೆರಿಗೆಯನ್ನು ನಿಗದಿತ ಕಾಲಮಿತಿಯೊಳಗೆ ಸಂಗ್ರಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಪಶ್ಚಿಮ ನಗರ ಪಾಲಿಕೆ ಆಯುಕ್ತ ಕೆ.ವಿ. ರಾಜೇಂದ್ರ ಮಾತನಾಡಿ, ‘ವಾಣಿಜ್ಯ ಸ್ವತ್ತುಗಳಿರುವ ಪ್ರದೇಶಗಳಲ್ಲಿ ಎಲ್ಲಾ ಕಂದಾಯ ಅಧಿಕಾರಿಗಳು ಸೇರಿ ದಿನಕ್ಕೆ 50ರಿಂದ 80 ಆಸ್ತಿಗಳ ಪರಿಷ್ಕರಣೆ ನಡೆಸಲಾಗುತ್ತಿದೆ. ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಸಲ್ಲಿಸಿದ ಅರ್ಜಿಗಳನ್ನೂ ಪರಿಶೀಲಿಸಿ ಎ-ಖಾತಾ ನೀಡುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಹೇಳಿದರು.

ತೆರವು: ಬ್ಯಾಟರಾಯನಪುರ ವಿಭಾಗ ವ್ಯಾಪ್ತಿಯಲ್ಲಿನ ಜಕ್ಕೂರು ಉಪ ವಿಭಾಗದ ವಾರ್ಡ್‌ ಸಂಖ್ಯೆ 17 ರ ಜಕ್ಕೂರು ದಾಸರಹಳ್ಳಿ ಬಡಾವಣೆಯಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಲಾಗುತ್ತಿದ್ದ ಕಟ್ಟಡವನ್ನು ಉತ್ತರ ನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.

ನೆಲ+1 ಮಹಡಿ ಕಟ್ಟಡದ ಮೇಲೆ ಹೆಚ್ಚುವರಿಯಾಗಿ ಎರಡು ಅಂತಸ್ತು ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಕಟ್ಟಡದ 4ನೇ ಅಂತಸ್ತಿಗೆ ಯಾವುದೇ ಪರವಾನಗಿ ಪಡೆಯದೇ ಅನಧಿಕೃತವಾಗಿ ನಿರ್ಮಿಸಲಾಗುತ್ತಿತ್ತು ಎಂದು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.