ADVERTISEMENT

ಮಲೆನಾಡಿನಲ್ಲೂ ನೀರಿನ ಕೊರತೆ: ಗಿರೀಶ್ ಕಾಸರವಳ್ಳಿ

‘ಭೂತಕಾಲ, ವರ್ತಮಾನವನ್ನು ಸೇರಿಸಿಕೊಂಡು ಭವಿಷ್ಯವನ್ನು ಅರ್ಥ ಮಾಡಿಕೊಳ್ಳಬೇಕಿದೆ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 16:25 IST
Last Updated 15 ನವೆಂಬರ್ 2025, 16:25 IST
ಬೆಂಗಳೂರಿನಲ್ಲಿ ಶನಿವಾರ ಮಲೆನಾಡು ಬರಹಗಾರರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಲ್.ಶಂಕರ್, ಬಿ.ಕೆ.ಸುಮಿತ್ರ, ಎನ್‌.ಎಸ್.ಶ್ರೀಧರ ಮೂರ್ತಿ, ಗಿರೀಶ್ ಕಾಸರವಳ್ಳಿ, ಬಿ.ಆರ್‌.ಗುರುಪ್ರಸಾದ್‌ ಭಾಗವಹಿಸಿದ್ದರು. 
ಬೆಂಗಳೂರಿನಲ್ಲಿ ಶನಿವಾರ ಮಲೆನಾಡು ಬರಹಗಾರರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಲ್.ಶಂಕರ್, ಬಿ.ಕೆ.ಸುಮಿತ್ರ, ಎನ್‌.ಎಸ್.ಶ್ರೀಧರ ಮೂರ್ತಿ, ಗಿರೀಶ್ ಕಾಸರವಳ್ಳಿ, ಬಿ.ಆರ್‌.ಗುರುಪ್ರಸಾದ್‌ ಭಾಗವಹಿಸಿದ್ದರು.    

ಬೆಂಗಳೂರು: ಮಲೆನಾಡಿನಲ್ಲಿ ಮಳೆ, ಮರ, ಕಾಡು ಮಾಯವಾಗಿ ನೀರಿನ ಕೊರತೆ ಉಂಟಾಗಿದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.

ನಗರದಲ್ಲಿ ಶನಿವಾರ ಮಲೆನಾಡು ಬರಹಗಾರರ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಡಸುರಗಿ (ಕಾನನದ ಕುಸುಮಗಳು) ಜನಾರ್ಪಣೆಗೊಳಿಸಿ ಮಾತನಾಡಿದರು.

‘ಬಾಲ್ಯದಲ್ಲಿ ಮನೆಯಿಂದ ಹೊರ ಬಂದರೆ ಮಳೆ, ಮರ, ಪ್ರಾಣಿಗಳು, ಬೆಟ್ಟ ಗುಡ್ಡಗಳನ್ನು ನೋಡುತ್ತಿದ್ದೆವು. ಕಾಡಿನಲ್ಲಿ ಹಾದು ಹೋಗಲು ಭಯವಾಗುತ್ತಿತ್ತು. ಆಗ ಜತೆಯಲ್ಲಿ ಒಬ್ಬರನ್ನು ಕರೆದೊಯ್ಯುತ್ತಿದ್ದೆವು. ಈಗ ಮಲೆನಾಡಿನ ಪರಿಸ್ಥಿತಿ ಬದಲಾಗಿದ್ದು, ಬಟಾ ಬಯಲಾಗಿದೆ. ಮಳೆ, ಮರ, ಪ್ರಾಣಿಗಳು ಇಲ್ಲವಾಗಿವೆ. ಫೆಬ್ರುವರಿ ತಿಂಗಳಲ್ಲಿ ₹3 ಸಾವಿರಕ್ಕೆ ಟ್ಯಾಂಕರ್ ನೀರು ತರಿಸಿಕೊಳ್ಳುವ ಸ್ಥಿತಿ ಬಂದಿದೆ’ ಎಂದು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ಕೇವಲ ಭೂತಕಾಲದ ಬಗ್ಗೆ ಯೋಚಿಸಿದರೆ ಸಾಲದು. ಅದೇ ರೀತಿ ವರ್ತಮಾನದ ಬಗ್ಗೆ ಮಾತ್ರ ಮಾತನಾಡಿದರೆ ಸಾಲದು. ಭೂತಕಾಲ ಮತ್ತು ವರ್ತಮಾನವನ್ನು ಸೇರಿಸಿಕೊಂಡು ಭವಿಷ್ಯವನ್ನು ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಾಹಿತಿ ಕುವೆಂಪು ಅವರು ತಮಗಿದ್ದ ಅಗಾಧ ಜೀವನ ಪ್ರೇಮ, ಅನುಭವಗಳನ್ನು ಸಾಹಿತ್ಯದಲ್ಲಿ ಮಂಡಿಸುತ್ತಿದ್ದರು. ಅನುಭವದಲ್ಲಿ ಜೀವನವನ್ನು ನೋಡುವುದು ಮತ್ತು ಆ ಮುಖೇನ ಜೀವನವನ್ನು ಗ್ರಹಿಸುವುದು ಅವರ ವಿಶಿಷ್ಟತೆಯಾಗಿತ್ತು. ಸಾಹಿತಿ ಅನಂತಮೂರ್ತಿ ಅವರು ಯೋಚನೆಗಳ ಮೂಲಕ ಬದುಕನ್ನು ನೋಡುತ್ತಿದ್ದರು ಎಂದರು.

ಮಲೆನಾಡಿನ ಹಲವು ಸಾಧಕರನ್ನು ಮುನ್ನೆಲೆಗೆ ತರುವುದು ಮತ್ತು ಹೆಚ್ಚಿನ ಪ್ರಚಾರ ಮಾಡುವುದು ಅಗತ್ಯವಿದೆ. ಮಲೆನಾಡಿನಲ್ಲಿ ವಿಜ್ಞಾನಿಗಳು, ಪತ್ರಕರ್ತರು, ಎಂಜಿನಿಯರ್‌ಗಳು , ಉದ್ಯಮಿಗಳು, ರಾಜಕಾರಣಿಗಳು ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಇದ್ದಾರೆ. ಕಾಡಸುರಗಿಯಲ್ಲಿ 40 ಸಾಧಕರ ಲೇಖನವಿದೆ. ಮಲೆನಾಡಿನ ಒಂದು ಭಾಗದಿಂದ ಇಷ್ಟೊಂದು ಸಾಧಕರು ಹೇಗೆ ಬರುವುದಕ್ಕೆ ಸಾಧ್ಯ ಎಂದು ಯೋಚಿಸಿದಾಗ, ಹಲವರು ಅಲ್ಲಿನ ಪರಿಸರದ ಗುಣ ಎನ್ನುತ್ತಾರೆ ಎಂದು ನುಡಿದರು.

ಹೊಸ ಪ್ರತಿಭೆಗಳನ್ನು ಗುರುತಿಸುವಾಗ ಅವರಿಗೆ ಎಷ್ಟರ ಮಟ್ಟಿಗೆ ಜೀವನ ಪ್ರೀತಿ, ಸಂಶೋಧನೆಗಳು, ಕೆಲಸಗಳು, ಕ್ರಿಯೆಗಳು ಜೀವಪರವಾಗಿದೆ ಎನ್ನುವುದನ್ನು ನೋಡಬೇಕು. ಪ್ರತಿ ವರ್ಷವೂ ಹೊಸ ಸಾಧಕರನ್ನು ಪರಿಚಯಿಸಿ, ಪುಸ್ತಕ ಹೊರ ತರಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್.ಶಂಕರ್, ಗಾಯಕಿ ಬಿ.ಕೆ.ಸುಮಿತ್ರಾ, ಮಲೆನಾಡು ಬರಹಗಾರರ ವೇದಿಕೆ ಅಧ್ಯಕ್ಷ ಪ್ರೊ.ಎನ್.ಎಸ್.ಶ್ರೀಧರ್ ಮೂರ್ತಿ, ಜವಹಾರಲಾಲ್ ನೆಹರೂ ತಾರಾಲಯ ನಿರ್ದೇಶಕ ಬಿ.ಆರ್.ಗುರುಪ್ರಸಾದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.