ADVERTISEMENT

ಮಕ್ಕಳ ಸಾಹಿತ್ಯಕ್ಕೂ ಗಂಭೀರ ನೆಲೆ ಬೇಕು: ಸಾಹಿತಿ ಆನಂದ ವಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 17:30 IST
Last Updated 7 ಸೆಪ್ಟೆಂಬರ್ 2025, 17:30 IST
ನಗರದ ಭಾರತೀಯ ವಿದ್ಯಾ ಭವನದಲ್ಲಿ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು ಭಾರತೀಯ ವಿದ್ಯಾಭವನ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಪತ್ನಿ ಅಪರ್ಣಾ ಅವರೊಂದಿಗೆ ಆನಂದ ವಿ. ಪಾಟೀಲ ಅವರು ಪ್ರೊ.ವಿ.ಕೃ. ಗೋಕಾಕ್’ ಪ್ರಶಸ್ತಿ ಸ್ವೀಕರಿಸಿದರು. ಪ್ರಜಾವಾಣಿ ಚಿತ್ರ
ನಗರದ ಭಾರತೀಯ ವಿದ್ಯಾ ಭವನದಲ್ಲಿ ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು ಭಾರತೀಯ ವಿದ್ಯಾಭವನ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಪತ್ನಿ ಅಪರ್ಣಾ ಅವರೊಂದಿಗೆ ಆನಂದ ವಿ. ಪಾಟೀಲ ಅವರು ಪ್ರೊ.ವಿ.ಕೃ. ಗೋಕಾಕ್’ ಪ್ರಶಸ್ತಿ ಸ್ವೀಕರಿಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಮಕ್ಕಳ ಸಾಹಿತ್ಯಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿ, ಗಟ್ಟಿಯಾದ ನೆಲೆ ಒದಗಿಸಬೇಕು’ ಎಂದು ಸಾಹಿತಿ ಆನಂದ ವಿ.ಪಾಟೀಲ ಸಲಹೆ ನೀಡಿದರು.

ಭಾರತೀಯ ವಿದ್ಯಾಭವನ ಹಾಗೂ ವಿನಾಯಕ ಗೋಕಾಕ್‌ ವಾಙ್ಮಯ ಟ್ರಸ್ಟ್‌ ಜಂಟಿಯಾಗಿ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ವಿ.ಕೃ.ಗೋಕಾಕ್‌ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ, ಚಿಲ್ಡ್ರನ್ಸ್‌ ಬುಕ್‌ ಟ್ರಸ್ಟ್‌, ನ್ಯಾಷನಲ್‌ ಬುಕ್‌ ಟ್ರಸ್ಟ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಕೂಡ ಮಕ್ಕಳ ಸಾಹಿತ್ಯಕ್ಕೆ ಮಹತ್ವ ನೀಡುತ್ತಿಲ್ಲ. ಇದಕ್ಕಾಗಿ ರೂಪಿಸಿರುವ ಬೈಲಾಗಳು ಸರಿಯಾಗಿಲ್ಲ ಎಂದು ಪತ್ರ ಬರೆದರೆ, ಅದಕ್ಕೆ ಉತ್ತರವನ್ನೂ ನೀಡುವುದಿಲ್ಲ ಎಂದು ನುಡಿದರು.

ADVERTISEMENT

ಕವಿಯತ್ರಿ ಶ್ರೀದೇವಿ ಕೆರೆಮನೆ ಮಾತನಾಡಿ, ‘ಸಾಹಿತ್ಯ ಕ್ಷೇತ್ರವೇ ಕವಲು ದಾರಿಯಲ್ಲಿದೆ. ಪಂಥ, ಜಾತಿಗಳ ನಡುವಿನ ಹೋರಾಟ, ತಿಕ್ಕಾಟದಲ್ಲಿ ಸೃಜನಶೀಲ ಬರವಣಿಗೆ ಕಡಿಮೆಯಾಗಿದೆ. ಸಾಹಿತಿಗಳಿಗೆ ಹಿಂದೆಲ್ಲ ಸರ್ಕಾರ ಗೌರವ ನೀಡುತ್ತಿತ್ತು. ಈಗ ಸರ್ಕಾರ ಅಷ್ಟೇ ಅಲ್ಲ, ಜನಸಾಮಾನ್ಯರು ಕೂಡ ಸಾಹಿತಿಗಳನ್ನು ತಿರಸ್ಕಾರದಿಂದ ನೋಡುವ ಸನ್ನಿವೇಶ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಟ್ರಸ್ಟ್‌ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಮಕ್ಕಳ ಸಾಹಿತ್ಯವನ್ನು ಪ್ರಧಾನವಾಗಿ ಚರ್ಚಿಸುವಂತಾಗಬೇಕು. ಇಂತಹ ಸನ್ನಿವೇಶದಲ್ಲೂ ಆನಂದ ಪಾಟೀಲರು ಮಕ್ಕಳ ಸಾಹಿತಿಯಾಗಿ ಉಳಿಯದೇ, ಮಕ್ಕಳ ಸಾಹಿತ್ಯ ಮೀಮಾಂಸೆ ರೂಪಿಸುತ್ತಿದ್ದಾರೆ. ಈ ವಲಯಕ್ಕೂ ಗೌರವ ಸಿಗುವಂತಾಗಬೇಕು ಎಂಬ ಸದುದ್ದೇಶದಿಂದಲೇ ಅವರಿಗೆ ಗೋಕಾಕ್‌ ಪ್ರಶಸ್ತಿ ನೀಡಲಾಗಿದೆ’ ಎಂದರು.

ಟ್ರಸ್ಟ್‌ನ ಗೌರವ ಅಧ್ಯಕ್ಷ ಅನಿಲ್‌ ಗೋಕಾಕ್‌ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವ್‌ ಸಿಂಘ್, ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಕೆಳಗಿನಮನಿ, ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ.ರಾಘವನ್‌, ನಿರ್ದೇಶಕ ಎಚ್‌.ಎನ್‌.ಸುರೇಶ್‌ ಹಾಜರಿದ್ದರು.

ಕಾಟಾಚಾರದ ಪ್ರಶಸ್ತಿ: ಬೇಸರ

ವಿ.ಕೃ.ಗೋಕಾಕ್‌ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿದರೂ ಅದನ್ನು ಕಾಟಾಚಾರದಿಂದಲೇ ನೀಡಲಾಗುತ್ತಿದೆ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಸುರೇಶ್‌ ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸರ್ಕಾರದಿಂದ ಪ್ರಶಸ್ತಿ ನೀಡಿದರೂ ಕಾರ್ಯಕ್ರಮವನ್ನು ಸರಿಯಾಗಿ ನಡೆಸುತ್ತಿಲ್ಲ. ಟ್ರಸ್ಟ್‌ ಮಾತ್ರ ಹದಿನೈದು ವರ್ಷದಿಂದ ತಪ್ಪದೇ ಪ್ರಶಸ್ತಿ ನೀಡುತ್ತಾ ಬಂದಿದೆ‘ ಎಂದರು. ‘ಗೋಕಾಕ್‌ ಕುಟುಂಬದವರ ಬೆಂಬಲದಿಂದ ಟ್ರಸ್ಟ್‌ ಸಕ್ರಿಯವಾಗಿದೆ. ಸರ್ಕಾರದ ಅನುದಾನ ಪಡೆಯದೇ ಸ್ವಂತ ಹಣದಿಂದಲೇ ಕಾರ್ಯಕ್ರಮ ರೂಪಿಸುತ್ತಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.