ADVERTISEMENT

ಚಿನ್ನ, ಪ್ಲಾಟಿನಂ ಕಳವು ಮಾಡಿದ್ದ ಮನೆಕೆಲಸದಾಕೆ ಬಂಧನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 15:53 IST
Last Updated 11 ಡಿಸೆಂಬರ್ 2025, 15:53 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಮಹಿಳೆಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬಿಹಾರದ ಚಾಂದಿನಿ (28) ಎಂಬಾಕೆಯನ್ನು ಬಂಧಿಸಿ, ₹31 ಲಕ್ಷ ಮೌಲ್ಯದ 236 ಗ್ರಾಂ ಚಿನ್ನ, 9 ಗ್ರಾಂ ಪ್ಲಾಟಿನಂ, 118 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮೂರು ವರ್ಷಗಳಿಂದ ನಗರದ ಹೆಣ್ಣೂರಿನಲ್ಲಿ ಪತಿ ಜತೆ ಆರೋಪಿ ವಾಸವಾಗಿದ್ದಾರೆ. ಈ ಮಧ್ಯೆ ತಾಯಿಯ ಆರೈಕೆ ಮಾಡಲು ಕೇರ್ ಟೇಕರ್‌ ಸಂಸ್ಥೆಯೊಂದರ ಮೂಲಕ ಚಾಂದಿನಿ ಅವರನ್ನು ಜೇನ್ಯೂ ಶರ್ಲಿನ್‌ ಜೈಬ್ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಜೈಬ್ ಅವರು ಕಾರ್ಯನಿಮಿತ್ತ ಅಕ್ಟೋಬರ್‌ನಲ್ಲಿ ವಿದೇಶಕ್ಕೆ ತೆರಳಿದ್ದರು. ಆದ್ದರಿಂದ ಅವರ ಸಂಬಂಧಿ ತಾರಾಬೇಗಂ ಅವರನ್ನು ಮನೆಗೆ ಕರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.‌

‘ತಾರಾಬೇಗಂ ಅವರು ಬರುವಾಗ ಚಿನ್ನಾಭರಣಗಳನ್ನು ಜತೆಯಲ್ಲಿ ತಂದಿದ್ದನ್ನು ಆರೋಪಿ ಗಮನಿಸಿದ್ದಳು. ಹಂತ-ಹಂತವಾಗಿ ಅವರ ಚಿನ್ನಾಭರಣ ಹಾಗೂ ದೂರುದಾರರ ತಾಯಿಯ ಎಟಿಎಂ ಕಾರ್ಡ್‌ ಕಳವು ಮಾಡಿದ್ದಳು. ಬಳಿಕ ಅದರಿಂದ ₹20 ಸಾವಿರ ನಗದು ಡ್ರಾ ಮಾಡಿದ್ದಳು. ಕೆಲ ದಿನಗಳ ಬಳಿಕ ತಾರಾಬೇಗಂ ಅವರ ಚಿನ್ನಾಭರಣಗಳು ಕಳವು ಆಗಿರುವುದು ಗೊತ್ತಾಯಿತು. ಜೇನ್ಯೂ ಶರ್ಲಿನ್ ಜೈಬ್ ಅವರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡರು. ಪ್ರಕೃತಿ ಲೇಔಟ್‌ನ ಮನೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಆರೋಪಿ ಮನೆಯಲ್ಲಿ ಬಚ್ಚಿಟ್ಟಿದ್ದ ₹31 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ಠಾಣಾಧಿಕಾರಿ ಎಸ್‌. ಅರುಣ್‌ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.