ADVERTISEMENT

ಬೆಂಗಳೂರು | ಜೂಜಾಟದ ಗೀಳು: ಸಾಲ ಮರು ಪಾವತಿಸಲು ವಂಚನೆ

ಪುತ್ರನ ಬಂಧನ, ತಂದೆಗೆ ಹುಡುಕಾಟ; ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 15:39 IST
Last Updated 3 ಡಿಸೆಂಬರ್ 2025, 15:39 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಚಿನ್ನಾಭರಣವನ್ನು ರಿಪೇರಿ ಮಾಡಿಕೊಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಪವನ್ ಕುಮಾರ್ ಬಂಧಿತ. ಆರೋಪಿಯ ತಂದೆ ಮುನಿರಾಜು ಅವರ ಬಂಧನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಕೆಂಗೇರಿ ಉಪನಗರದಲ್ಲಿ ಚಿನ್ನಾಭರಣಗಳ ರಿಪೇರಿ ಅಂಗಡಿ ನಡೆಸುತ್ತಿದ್ದ ಆರೋಪಿಗಳು, ಜೂಜಾಟದ ಗೀಳಿಗೆ ಬಿದ್ದಿದ್ದರು. ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲ ಮರುಪಾವತಿಸಲು ವಂಚನೆ ಎಸಗಿದ್ದರು ಎಂದು ಪೊಲೀಸರು ತಿಳಿಸಿದರು.

‘ತಂದೆ ಹಾಗೂ ಪುತ್ರ 2019ರಿಂದ ಕೆಂಗೇರಿ ಉಪನಗರದಲ್ಲಿ ಚಿನ್ನದ ಆಭರಣಗಳ ರಿಪೇರಿ ಅಂಗಡಿ ನಡೆಸುತ್ತಿದ್ದರು. ಚಿಕ್ಕಪುಟ್ಟ ಆಭರಣಗಳ ರಿಪೇರಿ ಮತ್ತು ಹೊಳಪಿನ ಕೆಲಸ ಮಾಡುವ ಮೂಲಕ ಸ್ಥಳೀಯ ಗ್ರಾಹಕರ ನಂಬಿಕೆ ಗಳಿಸಿದ್ದರು. ಆದರೆ, ​ಇತ್ತೀಚೆಗೆ ಆರೋಪಿಗಳು ಆಂಧ್ರಪ್ರದೇಶದಲ್ಲಿ ಮಟ್ಕಾ ಸೇರಿದಂತೆ ವಿವಿಧ ರೀತಿಯ ಜೂಜಿನ ಚಟಕ್ಕೆ ಬಿದ್ದು, ಹಣ ಕಳೆದುಕೊಂಡಿದ್ದರು. ಅದಕ್ಕಾಗಿ ಸಾಲ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ಅಂಗಡಿ ಮುಚ್ಚಿ ತಂದೆ, ಮಗ ಪರಾರಿ: ಸಾಲ ತೀರಿಸುವ ಉದ್ದೇಶದಿಂದ, ಗ್ರಾಹಕರು ರಿಪೇರಿಗೆ ತಂದ ಚಿನ್ನಾಭರಣಗಳನ್ನು ವಾಪಸ್ ನೀಡದೇ ಅವರು ವಿಳಂಬ ಮಾಡಲು ಆರಂಭಿಸಿದ್ದರು. ಕೆಲವು ತಿಂಗಳ ಹಿಂದೆ ಗ್ರಾಹಕರು ನೀಡಿದ್ದ ಚಿನ್ನಾಭರಣವನ್ನು ಒಟ್ಟುಗೂಡಿಸಿ, ಅಂಗಡಿ ಬಂದ್ ಮಾಡಿಕೊಂಡು ಪರಾರಿ ಆಗಿದ್ದರು. ವಂಚನೆಗೆ ಒಳಗಾದ ಗ್ರಾಹಕರೊಬ್ಬರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇದುವರೆಗೂ ನಡೆದ ತನಿಖೆಯಲ್ಲಿ ಆರೋಪಿಗಳು 20 ಮಂದಿ ಗ್ರಾಹಕರಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ. ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.