ADVERTISEMENT

ಗೂಗಲ್‌ ಪೇನಲ್ಲಿ ಪಾವತಿಗೆ ಅವಕಾಶವಿಲ್ಲ ಎಂದಿದ್ದಕ್ಕೆ ಗಲಾಟೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 21:39 IST
Last Updated 31 ಡಿಸೆಂಬರ್ 2019, 21:39 IST
   

ಬೆಂಗಳೂರು: ಹುಳಿಮಾವು ಬಳಿಯ ಎಸ್‌ಎಲ್‌ಆರ್‌ ಮದ್ಯದ ಮಳಿಗೆಯಲ್ಲಿ ಗೂಗಲ್‌ ಪೇ ಆ್ಯಪ್ ಮೂಲಕ ಹಣ ಪಾವತಿ ವಿಚಾರವಾಗಿ ಗಲಾಟೆ ನಡೆದಿದ್ದು, ಈ ಸಂಬಂಧ ಮಳಿಗೆಯ ಕೆಲಸಗಾರರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಮದ್ಯ ಖರೀದಿ ಮಾಡಲು ಬಂದಿದ್ದ ಗ್ರಾಹಕರು ತಮ್ಮ ಜೊತೆ ಜಗಳ ಮಾಡಿ ಬಾಟಲಿಗಳನ್ನು ಒಡೆದು ಹಾಕಿ ಚಾಕುವಿನಿಂದ ಇರಿದಿರುವುದಾಗಿ ಕೆಲಸಗಾರರು ಆರೋಪಿಸಿದ್ದಾರೆ. ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಆಧರಿಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಮಳಿಗೆಯಲ್ಲಿ ಮದ್ಯದ ಬಾಟಲಿ ಖರೀದಿಸಿದ್ದ ಯುವಕರ ಗುಂಪು ಗೂಗಲ್ ಪೇ ಮೂಲಕ ಹಣ ಪಾವತಿಸಲು ಮುಂದಾಗಿತ್ತು. ಮಳಿಗೆಯ ಕ್ಯಾಷಿಯರ್ ಇದಕ್ಕೆ ಅವಕಾಶ ಇಲ್ಲ ಎಂದಿದ್ದರು. ಗೂಗಲ್‌ ಪೇ ಮೂಲಕವಷ್ಟೇ ಹಣ ಕೊಡುವುದಾಗಿ ಆರೋಪಿಗಳು ವಾದಿಸಿದ್ದರು’

ADVERTISEMENT

‘ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿತ್ತು. ಹೊರಟು ಹೋಗಿದ್ದ ಆರೋಪಿಗಳು ಪಾನಮತ್ತರಾಗಿ ಪುನಃ ಮಳಿಗೆಗೆ ಬಂದಿದ್ದರು. ಜಗಳ ತೆಗೆದು ಮದ್ಯದ ಬಾಟಲಿಗಳನ್ನು ಒಡೆದು ಹಾಕಿದ್ದರು. ಅದನ್ನು ಪ್ರಶ್ನಿಸಿದ್ದ ಕ್ಯಾಶಿಯರ್‌ಗೆ ಚಾಕುವಿನಿಂದ ಇರಿದಿದ್ದರು ಎಂದು ಕೆಲಸಗಾರರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.