ಬೆಂಗಳೂರು: ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳಲ್ಲಿ ಇರುವ ಗುತ್ತಿಗೆ ಆಧಾರಿತ ನೌಕರಿ ವ್ಯವಸ್ಥೆ ತೊಲಗಬೇಕು ಎಂದು ಸಂಸ್ಕೃತಿ ಚಿಂತಕ ಕೆ.ಎಂ. ಮರುಳಸಿದ್ದಪ್ಪ ಆಗ್ರಹಿಸಿದರು.
ಸಾಂಸ್ಕೃತಿಕ ಪರಿಚಾರಕ ಕೆ.ರೇವಣ್ಣ ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆ. ರೇವಣ್ಣ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸರ್ಕಾರಿ ಇಲಾಖೆಯಲ್ಲಿ ರೇವಣ್ಣ ಗುತ್ತಿಗೆ ನೌಕರನಾಗಿ ಸೇರಿ ಗುತ್ತಿಗೆ ನೌಕರನಾಗಿಯೇ ನಿವೃತ್ತಿ ಹೊಂದುತ್ತಿದ್ದಾರೆ. ಇದು ಶೋಚನೀಯ ಮತ್ತು ಖಂಡನೀಯ ಎಂದರು.
ನಾಟಕ ಅಕಾಡೆಮಿಯಲ್ಲಿ ಹಂಗಾಮಿ ನೌಕರನಾಗಿ ಕೆಲಸ ಮಾಡುತ್ತಲೇ ಸಾಂಸ್ಕೃತಿಕ ಲೋಕದಲ್ಲಿ ‘ಭಾಗವತರು’ ಮೂಲಕ ಸಾರ್ಥಕ ಕೆಲಸಗಳನ್ನು ಮಾಡಿ ಸಂಸ್ಕೃತಿ ಪರಿಚಾರಿಕೆಗೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.
ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷೆ ಮಾಲತಿ ಸುಧೀರ್ ಮಾತನಾಡಿ, ‘ಮಲ್ಲಿಗೆ ಹೂವನ್ನು ಎಲ್ಲೇ ಬಚ್ಚಿಟ್ಟರೂ ಅದರ ಸುಗಂಧ ಹರಡುತ್ತದೆ. ರೇವಣ್ಣ ಮಲ್ಲಿಗೆ ಹೂವಿನಂತೆ. ಅವರ ಸಾಧನೆ, ಸೇವೆ, ಸಾಂಸ್ಕೃತಿಕ ಚಟುವಟಿಕೆಗಳು ಎಲ್ಲೆಡೆ ಪಸರಿಸಿವೆ’ ಎಂದರು.
ಲೇಖಕಿ ವಿಜಯಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಎಲ್.ಹನುಮಂತಯ್ಯ ‘ರಂಗಭಾಗವತ’ ಕೃತಿ ಜನಾರ್ಪಣೆ ಮಾಡಿದರು. ಅಭಿನಂದನಾ ಸಮಿತಿಯ ಅಧ್ಯಕ್ಷ ಜಿ.ಎನ್.ಮೋಹನ್, ರಂಗಕರ್ಮಿ ಬಿ.ವಿ.ರಾಜಾರಾಂ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ್ ಮಾಸ್ತರ್ ಮತ್ತು ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ಅಭಿನಂದನಾ ಗ್ರಂಥದ ಸಂಪಾದಕ ರಾಜು ಮಳವಳ್ಳಿ, ಕೀರ್ತನಕಾರ ಲಕ್ಷ್ಮಣ ದಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.