
ಯಲಹಂಕ: ಅಮೆರಿಕದ ಪನಾಮದಲ್ಲಿ ನಡೆಯಲಿರುವ ‘ಫಸ್ಟ್ ಗ್ಲೋಬಲ್ ಚಾಲೆಂಜ್-ರೋಬೋಟಿಕ್ಸ್ ಒಲಿಂಪಿಕ್ಸ್-2025’ರಲ್ಲಿ ಭಾರತವನ್ನು ಪ್ರತಿನಿಧಿಸಲು ನಗರದ ಸರ್ಕಾರಿ ಪ್ರೌಢಶಾಲೆಯ ಐವರು ವಿದ್ಯಾರ್ಥಿಗಳು ಆಯ್ಕೆ ಆಗಿದ್ದಾರೆ.
ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯ ಅರ್ಜುನ್.ಕೆ ರಾಜ್(ರೋಬೋ ಕ್ಯಾಡ್ ಡಿಸೈನರ್), ಜಿ.ಎನ್.ಚಂದನ್ ರಾಜ್(ಎಲೆಕ್ಟ್ರಾನಿಕ್ಸ್ ಲೀಡ್), ಗೌರೇಶ್.ಕೆ (ರೋಬೋ ಪ್ರೋಗ್ರಾಮರ್), ನಿಂಗರಾಜ್(ಮೆಕ್ಯಾನಿಕಲ್ ಲೀಡ್) ಹಾಗೂ ಪರಶುರಾಮ್.ಎಂ(ರೋಬೋ ಡ್ರೈವರ್) ಆಯ್ಕೆಯಾಗಿರುವ ವಿದ್ಯಾರ್ಥಿಗಳು.
ಈ ವಿದ್ಯಾರ್ಥಿಗಳು ತಮ್ಮ ರೋಬೋ ಪ್ರದರ್ಶಿಸುವುದರ ಜೊತೆಗೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಸ್ಟೆಮ್ ಎಜುಕೇಷನ್ ಟ್ರಸ್ಟ್ ಮತ್ತು ಇನ್ನೊವೇಷನ್ ಸ್ಟೋರಿ ಸಹಯೋಗದೊಂದಿಗೆ ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ‘ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳ ಈ ಸಾಧನೆ ಹೆಮ್ಮೆಪಡುವಂತದ್ದು. ಇತರರಿಗೂ ಇದು ಸ್ಫೂರ್ತಿಯಾಗಲಿದೆ. ಶಿಕ್ಷಣವು ಕುತೂಹಲವನ್ನು ಹುಟ್ಟುಹಾಕುವುದರ ಜೊತೆಗೆ ಉದ್ಯಮಶೀಲ ಮನಸ್ಥಿತಿಯನ್ನು ಬೆಳೆಸಬೇಕು’ ಎಂದು ಹೇಳಿದರು.
‘ರೇವಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನಾವೀನ್ಯವೆನ್ನುವುದು ದೈನಂದಿನ ವ್ಯವಹಾರವಾಗಿದೆ. ಕೇವಲ ಪದವಿಗಳನ್ನು ನೀಡದೆ, ನಾವೀನ್ಯಕಾರರು ಮತ್ತು ಸಂಶೋಧಕರನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.