ADVERTISEMENT

ದರ್ಶನ್ ಕೇಸ್: ಜಾಮೀನು ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅನುಮತಿ

ಮೇಲ್ಮನವಿ ವಾದಕ್ಕೆ ವಕೀಲರ ನೇಮಕ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 14:40 IST
Last Updated 30 ಡಿಸೆಂಬರ್ 2024, 14:40 IST
ದರ್ಶನ್‌ 
ದರ್ಶನ್‌    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್‌ ನೀಡಿರುವ ‘ನಿಯಮಿತ’ (ರೆಗ್ಯುಲರ್‌) ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ನಗರ ಪೊಲೀಸರಿಗೆ ಅನುಮತಿ ನೀಡಿದೆ.

ಡಿ.13ರಂದು ಹೈಕೋರ್ಟ್ ಏಕಸದಸ್ಯ ಪೀಠ ದರ್ಶನ್, ಪವಿತ್ರಗೌಡ ಸೇರಿದಂತೆ ಏಳು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ನಗರ ಪೊಲೀಸರು, ಗೃಹ ಇಲಾಖೆಗೆ ಕಳೆದ ವಾರ ಪತ್ರ ಬರೆದಿದ್ದರು. ಅನುಮತಿ ನೀಡಿ ಆದೇಶ ಸೋಮವಾರ ಹೊರಡಿಸಲಾಗಿದೆ.

ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ಅವರನ್ನು ನೇಮಿಸಲಾಗಿದೆ. ಅನಿಲ್ ಸಿ. ನಿಶಾನಿ ಹಾಗೂ ಹೈಕೋರ್ಟ್‌ನ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜವಾಬ್ದಾರಿ ನೀಡಿ ಆದೇಶಿಸಲಾಗಿದೆ.

ADVERTISEMENT

ದರ್ಶನ್‌ ಅವರು ಬಳ್ಳಾರಿ ಜೈಲಿನಲ್ಲಿದ್ದಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ದರ್ಶನ್‌ ಪರ ವಕೀಲರು ವೈದ್ಯಕೀಯ ಚಿಕಿತ್ಸೆಗೆ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ್ದ ನ್ಯಾಯಾಲಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಿತ್ತು. ಬಳ್ಳಾರಿ ಜೈಲಿನಿಂದ ದರ್ಶನ್ ಬಿಡುಗಡೆಯಾಗಿ ಕೆಂಗೇರಿಯ ಬಿಜಿಎಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ನಂತರ, ದರ್ಶನ್‌ಗೆ ನಿಯಮಿತ ಜಾಮೀನು ಲಭಿಸಿತ್ತು. ಮೈಸೂರಿಗೆ ತೆರಳಲು ಹೈಕೋರ್ಟ್‌ನಿಂದ ಕೆಲವು ದಿನಗಳ ಹಿಂದೆ ಅನುಮತಿ ಪಡೆದಿದ್ದ ದರ್ಶನ್, ಸದ್ಯ ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ವಾಸ್ತವ್ಯ ಮಾಡಿದ್ದಾರೆ.

‘ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿರುವ ಕಡತಗಳನ್ನು ಗೃಹ ಇಲಾಖೆಯಿಂದ ಪೊಲೀಸರಿಗೆ ರವಾನಿಸಲಾಗಿದೆ. ಕನ್ನಡದಿಂದ ಇಂಗ್ಲಿಷ್‌ಗೆ ದೋಷಾರೋಪ ಪಟ್ಟಿ ಭಾಷಾಂತರ ಕೆಲಸವು ಪೂರ್ಣವಾಗಿದೆ. ಎರಡು ದಿನಗಳ ಒಳಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ನಗರದ ಮಾಗಡಿ ರಸ್ತೆಯ ಸುಮನಹಳ್ಳಿ ಬಳಿಯ ಚರಂಡಿ ಬಳಿ ರೇಣುಕಸ್ವಾಮಿ (33) ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಇದು ಕೊಲೆ ಎಂಬುದು ದೃಢಪಟ್ಟಿತ್ತು. ಕೊಲೆ ಮಾಡಿದ್ದ ಆರೋಪದ ಅಡಿ ಪಶ್ಚಿಮ ವಿಭಾಗದ ಪೊಲೀಸರು ಮೈಸೂರಿನಲ್ಲಿ ನಟ ದರ್ಶನ್ ಅವರನ್ನು ಜೂನ್ 11ರಂದು ಬಂಧಿಸಿದ್ದರು. ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ದರ್ಶನ್ ಮತ್ತು ಅವರ ಸಹಚರರು ರೇಣುಕಸ್ವಾಮಿ ಅವರನ್ನು ಕೊಲೆ ಮಾಡಿದ್ದ ಆರೋಪದ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 17 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.