ADVERTISEMENT

ಪಿ.ಎಂ ಆವಾಸ್: ಅಲ್ಪಸಂಖ್ಯಾತರ ಕಾಲೊನಿಗೆ ₹1,000 ಕೋಟಿ ಅನುದಾನ -ಸಿದ್ದರಾಮಯ್ಯ

ಫಲಾನುಭವಿ ವಂತಿಗೆ ₹1 ಲಕ್ಷಕ್ಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 15:48 IST
Last Updated 29 ಡಿಸೆಂಬರ್ 2023, 15:48 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಬೆಂಗಳೂರು: ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕಾಲೊನಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ₹1,000 ಕೋಟಿ ವೆಚ್ಚದ ಕಾಮಗಾರಿಗಳಿಗೆ ಪ್ರಸ್ತಾವವನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಅಲ್ಪಸಂಖ್ಯಾತರ ಅಭಿವೃದ್ಧಿ ಹಾಗೂ ವಸತಿ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಲ್ಪಸಂಖ್ಯಾತರ  ಕಾಲೊನಿಗಳನ್ನು ಗುರುತಿಸಿ, ಅಭಿವೃದ್ಧಿ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ನಿರ್ದೇಶನ ನೀಡಿದರು.

ADVERTISEMENT

ಅಲ್ಪಸಂಖ್ಯಾತರಿಗೆ ಸೌಲಭ್ಯ ಒದಗಿಸುವ ವಿವಿಧ ಯೋಜನೆಗಳಿಗೆ ಭಾರಿ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುವ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು. ಗಣನೀಯ ಪ್ರಮಾಣದಲ್ಲಿ ಅರ್ಜಿಗಳು ಬಂದಿರುವುದರಿಂದ ಅನುದಾನದ ಕೊರತೆ ಎದುರಾಗಿರುವುದನ್ನು ಅಧಿಕಾರಿಗಳು ವಿವರಿಸಿದರು. ಮುಂದಿನ ವರ್ಷದ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

52 ಸಾವಿರ ಮನೆಗಳಿಗೆ ಅನುದಾನ: ‘ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪ್ರಧಾನ ಮಂತ್ರಿ ಆವಾಸ್‌ (ನಗರ) ವಸತಿ ಯೋಜನೆಯಡಿ ಕೈಗೆತ್ತಿಕೊಂಡಿರುವ 52,189 ಮನೆಗಳ ಫಲಾನುಭವಿಗಳ ವಂತಿಗೆ ಬಾಬ್ತು ₹3 ಲಕ್ಷವನ್ನು ಸರ್ಕಾರದಿಂದಲೇ ಭರಿಸಲು ಮುಖ್ಯಮಂತ್ರಿಯವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್ ಖಾನ್‌ ತಿಳಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘2013ರಲ್ಲಿ ಫಲಾನುಭವಿಗಳ ಆಯ್ಕೆಯಾಗಿದೆ. ಆದರೆ, ಫಲಾನುಭವಿಗಳ ವಂತಿಗೆ ಪಾವತಿಯಾಗದ ಕಾರಣದಿಂದ ಈ ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ. ಕೊಳೆಗೇರಿ ಅಭಿವೃದ್ಧಿ ಮಂಡಳಿ ವಸತಿ ಯೋಜನೆ ಫಲಾನುಭವಿಗಳಿಗೆ ನೆರವು ನೀಡಿದಂತೆ ಪ್ರಧಾನಮಂತ್ರಿ ಆವಾಸ್‌ ಯೋಜನೆ ಫಲಾನುಭವಿಗಳಿಗೆ ನೆರವು ನೀಡಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿಯವರು ಪುರಸ್ಕರಿಸಿದ್ದಾರೆ’ ಎಂದರು.

ಈ ಯೋಜನೆಯಡಿ ಒಟ್ಟು ₹7.5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗುತ್ತದೆ. ₹3.5 ಲಕ್ಷ ಸಹಾಯಧನ ನೀಡಲಾಗುತ್ತದೆ. ₹4 ಲಕ್ಷವನ್ನು ಫಲಾನುಭವಿ ಭರಿಸಬೇಕಿತ್ತು. ₹1 ಲಕ್ಷವನ್ನು ಮಾತ್ರ ಫಲಾನುಭವಿಗಳು ಭರಿಸಲಿದ್ದು, ₹3 ಲಕ್ಷವನ್ನು ಸರ್ಕಾರವೇ ಭರಿಸಲಿದೆ. ₹1,879 ಕೋಟಿ ಫಲಾನುಭವಿಗಳ ವಂತಿಗೆ ಮತ್ತು ₹289 ಕೋಟಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವೇ ಅನುದಾನ ಒದಗಿಸಲಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಆರಂಭಿಸಿರುವ 3 ಲಕ್ಷ ಮನೆಗಳಲ್ಲಿ 1.31 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಬಾಕಿ ಉಳಿದಿರುವ 1.69 ಲಕ್ಷ ಮನೆಗಳ ನಿರ್ಮಾಣವನ್ನು 2024ರ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಕೊಳೆಗೇರಿ ಅಭಿವೃದ್ಧಿ ಮಂಡಳಿ ವಸತಿ ಯೋಜನೆಯಡಿ ಈ ಅವಧಿಯಲ್ಲಿ 25 ಸಾವಿರ ಮನೆಗಳ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್‌, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್‌, ವಸತಿ ಇಲಾಖೆ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್‌ ಜೈನ್‌ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.