ಬೆಂಗಳೂರು: ಒಂದು ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ತಿಂಗಳೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಸೋಮವಾರ ಉತ್ತರ ನೀಡಿದ ಅವರು, ‘ಕಂದಾಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಈಗ 1,000 ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆ ಭರ್ತಿಗೆ ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ’ ಎಂದರು.
ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಕಂದಾಯ ಇಲಾಖೆಯ ಸಾವಿರಾರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೇರೆ ಇಲಾಖೆಗಳು, ಅನ್ಯ ಕೆಲಸಗಳಿಗೆ ನಿಯೋಜನೆ ಮಾಡಲಾಗಿತ್ತು. ಇದರಿಂದ ಕಂದಾಯ ಇಲಾಖೆಯ ಕಾರ್ಯನಿರ್ವಹಣೆಗೆ ಅಡಚಣೆಯಾಗಿದೆ. ಈಗ ಅಂತಹ ನಿಯೋಜನೆ ಆದೇಶಗಳನ್ನು ರದ್ದು ಮಾಡಲಾಗುವುದು ಎಂದು ತಿಳಿಸಿದರು.
‘2,000 ಅಧಿಕಾರಿಗಳು, ಸಿಬ್ಬಂದಿಯ ನಿಯೋಜನೆ ಕೋರಿರುವ ಮನವಿಗಳು ಇಲಾಖೆಯ ಮುಂದಿವೆ. ಆದರೆ, ಯಾವುದನ್ನೂ ನಾನು ಒಪ್ಪಿಕೊಂಡಿಲ್ಲ. ಈ ಕಾರಣಕ್ಕಾಗಿ ನಮ್ಮ ಪಕ್ಷದ ಶಾಸಕರು ಕೂಡ ನನ್ನ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಕಂದಾಯ ಇಲಾಖೆಯ ಕೆಲಸಗಳು ನಡೆಯುವುದು ನನಗೆ ಮುಖ್ಯ. ಪ್ರತಿ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಐದು ಅಧಿಕಾರಿಗಳು, ಸಿಬ್ಬಂದಿಯ ನಿಯೋಜನೆಗಷ್ಟೇ ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಲಾಗುವುದು’ ಎಂದರು.
ಕುಂದಾಪುರ ತಾಲ್ಲೂಕು ಕಚೇರಿಗೆ 110 ಹುದ್ದೆಗಳು ಮಂಜೂರಾಗಿವೆ. ಅವುಗಳಲ್ಲಿ 70 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ಪೈಕಿ 19 ಮಂದಿ ನಿಯೋಜನೆಯಲ್ಲಿ ಬೇರೆಡೆ ಕೆಲಸ ಮಾಡುತ್ತಿದ್ದಾರೆ. ಆ ಎಲ್ಲ ನಿಯೋಜನೆ ಆದೇಶಗಳನ್ನು ರದ್ದುಪಡಿಸಲಾಗುವುದು ಎಂದು ಭರವಸೆ ನೀಡಿದರು.
ಹತ್ತು ವರ್ಷಗಳಿಂದ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಿಲ್ಲ. ಇದರಿಂದ ಇಲಾಖೆಯಲ್ಲಿ ಕಾನೂನು, ನಿಯಮ ಮತ್ತು ಕೆಲಸದ ವಿಧಾನ ತಿಳಿದ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲ ನೌಕರರಿಗೂ ಹಂತ ಹಂತವಾಗಿ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.