ಬೆಂಗಳೂರು: ಮಂಗಳ ಗೌರಿ ಹಬ್ಬವನ್ನು ಮಂಗಳವಾರ ಜನ ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆಯಿಂದಲೇ ಮನೆ ಸ್ವಚ್ಛಗೊಳಿಸಿ, ಬಾಗಿಲು ತೊಳೆದು ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದರು. ಹೆಣ್ಣು ಮಕ್ಕಳು, ಅಕ್ಕಪಕ್ಕದವರು, ಸಂಬಂಧಿಕರಿಗೆ ಬಾಗಿನ ಅರ್ಪಿಸಿದರು. ಪರಸ್ಪರ ಹಬ್ಬದ ಶುಭಾಶಯ ಕೋರಿದರು.
ಗೌರಿ ಮೂರ್ತಿ, ಮೊರ, ಹೂವು, ಹಣ್ಣು, ಮಾವಿನ ಎಲೆ ಇತರೆ ಸಾಮಗ್ರಿಗಳನ್ನು ಒಳಗೊಂಡ ‘ಬಾಗಿನ’ವನ್ನು ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ಮಹಿಳೆಯರ ಸಂಭ್ರಮ ಜೋರಾಗಿತ್ತು. ದೇವಾಲಯಗಳಲ್ಲೂ ವಿಶೇಷ ಪೂಜಾ ಕಾರ್ಯಗಳು ನಡೆದವು.
ಬುಧವಾರ ಗಣೇಶ ಹಬ್ಬ ಇರುವುದರಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರದಿಂದ ಸಾಗಿದವು. ಬೀದಿ ಬೀದಿಗಳಲ್ಲಿ ತೆರೆದಿರುವ ಅಂಗಡಿಗಳಲ್ಲಿ ಗಣಪತಿ ಮೂರ್ತಿಗಳ ಖರೀದಿ ಜೋರಾಗಿತ್ತು.
ಗಾಂಧಿ ಬಜಾರ್, ಜಯನಗರ, ಬಸವನಗುಡಿ, ಬನಶಂಕರಿ, ರಾಜಾಜಿನಗರ, ಮಲ್ಲೇಶ್ವರ ಸೇರಿ ನಗರದ ವಿವಿಧ ಭಾಗಗಳಲ್ಲಿ ಹೂವು, ಹಣ್ಣಿನ ತಾತ್ಕಾಲಿಕ ಮಳಿಗೆಗಳು, ಗಣಪತಿ ಮೂರ್ತಿಯ ಅಂಗಡಿಗಳು ತಲೆ ಎತ್ತಿವೆ. ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಬೀದಿ ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಯುವಕರ ಪಡೆ ಸಿದ್ಧತೆ ನಡೆಸಿತ್ತು.
ವಿಸರ್ಜನೆಗೆ ಸಜ್ಜು
ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಗರದಲ್ಲಿ 41 ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿ ನಿರ್ಮಿಸಲಾಗಿದ್ದು 489 ಸಂಚಾರಿ ಟ್ಯಾಂಕ್‌ಗಳನ್ನು ಬಿಬಿಎಂಪಿ ಸಜ್ಜುಗೊಳಿಸಿದೆ. ಕೆರೆಗಳಲ್ಲದೆ ಸಂಚಾರಿ ಟ್ಯಾಂಕ್‌ಗಳು ಎಲ್ಲ ವಾರ್ಡ್‌ಗಳಲ್ಲಿಯೂ ಲಭ್ಯವಾಗಲಿವೆ. ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಂಪೂರ್ಣ ವಿವರಗಳನ್ನು
ವೆಬ್‌ಸೈಟ್: https://apps.bbmpgov.in/ganesh2025/ ನಲ್ಲಿ ಪಡೆಯಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.