
ಬೆಂಗಳೂರು: ರಸ್ತೆಗಳಲ್ಲಿ ಪ್ರತಿ 200 ಅಡಿಗೆ ಎರಡು ಜಾಹೀರಾತು ಪ್ರದರ್ಶಿಸಲು ಅವಕಾಶ ಮಾಡಿಕೊಡುವ ‘ಗ್ರೇಟರ್ ಬೆಂಗಳೂರು ಪ್ರದೇಶ ಜಾಹೀರಾತು ನಿಯಮಗಳು– 2025’ ಅನ್ನು ಅಂತಿಮಗೊಳಿಸಿ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
2025ರ ನವೆಂಬರ್ 13ರಂದು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. 30 ದಿನದಲ್ಲಿ ಬಂದ ಸಾರ್ವಜನಿಕ ಸಲಹೆ, ಆಕ್ಷೇಪಗಳನ್ನು ಪರಿಗಣಿಸಿ, ಜ.13ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.
ಆಯಾ ಪ್ರದೇಶದ ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲಿ ಜಾಹೀರಾತು ಶುಲ್ಕವನ್ನು ನಿಗದಿಪಡಿಸಿ, ರಸ್ತೆಯ ಅಗಲಕ್ಕೆ ಅನುಗುಣವಾಗಿ ಪ್ರತಿ 100 ಮೀಟರ್‌ಗೆ ಜಾಹೀರಾತು ಪ್ರದರ್ಶಿಸಬಹುದು ಎಂದು 2025ರ ಜುಲೈ 15ರಂದು ‘ಬಿಬಿಎಂಪಿ (ಜಾಹೀರಾತು) ಬೈ–ಲಾ 2024’ ಅನ್ನು ಅಧಿಸೂಚಿಸಲಾಗಿತ್ತು.
ಜಿಬಿಎ, ಐದು ನಗರ ಪಾಲಿಕೆಗಳು ರಚನೆಯಾದ ಮೇಲೆ, ಬಹುತೇಕ ಅದೇ ನಿಯಮಗಳು ನಗರ ಪಾಲಿಕೆಗಳಿಗೆ ಅನ್ವಯವಾಗುವಂತೆ ಬದಲಾವಣೆ ಮಾಡಿ ‘ಗ್ರೇಟರ್ ಬೆಂಗಳೂರು ಪ್ರದೇಶ ಜಾಹೀರಾತು ನಿಯಮಗಳನ್ನು ಜಾರಿ ಮಾಡಲಾಗಿದೆ. ಕಳೆದ ಬಾರಿಗಿಂತ ಜಾಹೀರಾತು ಶುಲ್ಕ ಕಡಿಮೆ ಮಾಡುವ ಜೊತೆಗೆ, ರಸ್ತೆಯ ಅಕ್ಕಪಕ್ಕ 100 ಅಡಿಗೆ ಎರಡು ಜಾಹೀರಾತು ಪ್ರದರ್ಶಿಸಲು ನೀಡಲಾಗಿದ್ದ ಅವಕಾಶವನ್ನು 200 ಅಡಿಗೆ ಹೆಚ್ಚಿಸಲಾಗಿದೆ.
ರಸ್ತೆಗಳು, ವೃತ್ತಗಳು ಹಾಗೂ ಪ್ರದೇಶಗಳ ಮುಕ್ತ ಹರಾಜು ಅಥವಾ ಟೆಂಡರ್ ಅನ್ನು ಪ್ರತ್ಯೇಕ ಅಥವಾ ಲಾಟ್‌ಗಳಲ್ಲಿ ಒಟ್ಟುಗೂಡಿಸಿ ಏಜೆನ್ಸಿಗಳಿಗೆ ಪರವಾನಗಿ ನೀಡುವ ನಿರ್ಧಾರವನ್ನು ಜಿಬಿಎ ಮುಖ್ಯ ಆಯುಕ್ತರ ನೇತೃತ್ವದ ಜಾಹೀರಾತು ನಿಯಂತ್ರಣ ಸಮಿತಿಗೆ ನೀಡಲಾಗಿದೆ. ಅಲ್ಲದೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಜಾಹೀರಾತು ಸಲಹಾ ಸಮಿತಿ ರಚಿಸಲಾಗಿದೆ. ಹೊಸ ಜಾಹೀರಾತು ನೀತಿಯಿಂದ ಒಟ್ಟಾರೆ ವಾರ್ಷಿಕ ₹800 ಕೋಟಿ ಸಂಗ್ರಹಿಸುವ ನಿರೀಕ್ಷೆ ಇದೆ.
ಪಿಲ್ಲರ್ ಶುಲ್ಕ ಹಂಚಿಕೆ: ಬಿಎಂಆರ್‌ಸಿಎಲ್, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಕಟ್ಟಡ, ಆವರಣದಲ್ಲಿ ಪ್ರದರ್ಶಿಸುವ ಜಾಹೀರಾತುಗಳಿಗೆ ಆಯಾ ಸಂಸ್ಥೆಗಳು ಅವರ ನಿಯಮಗಳಂತೆ ಕ್ರಮ ಕೈಗೊಳ್ಳಬಹುದು. ಆದರೆ, ಸಾರ್ವಜನಿಕ ಸ್ಥಳ, ರಸ್ತೆಯಲ್ಲಿ ಜಾಹೀರಾತು ಪ್ರದರ್ಶಿಸಿದರೆ ಅದರ ಸಂಪೂರ್ಣ ಶುಲ್ಕವನ್ನು ನಗರ ಪಾಲಿಕೆಗೆ ಪಾವತಿಸಬೇಕು. ಇನ್ನು, ನಮ್ಮ ಮೆಟ್ರೊ ಪಿಲ್ಲರ್, ನಿಲ್ದಾಣ, ಮೂಲಸೌಕರ್ಯಗಳಲ್ಲಿ ಬಿಎಂಆರ್‌ಸಿಎಲ್, ‘ಗ್ರೇಟರ್ ಬೆಂಗಳೂರು ಪ್ರದೇಶ ಜಾಹೀರಾತು ನಿಯಮ–2025’ರಂತೆಯೇ ಟೆಂಡರ್ ಕರೆದು ಅವಕಾಶ ನೀಡಬಹದು. ಮೆಟ್ರೊ ಪಿಲ್ಲರ್‌ಗಳ ಜಾಹೀರಾತಿನಿಂದ ಬರುವ ಶುಲ್ಕ ಬಿಎಂಆರ್‌ಸಿಎಲ್ ಹಾಗೂ ಆಯಾ ನಗರ ಪಾಲಿಕೆಗಳ ಜಂಟಿ ಖಾತೆಯಲ್ಲಿ ಜಮೆಯಾಗಬೇಕು. ಇದನ್ನು ಎರಡೂ ಸಂಸ್ಥೆಗಳು ಸಮನಾಗಿ ಉಪಯೋಗಿಸಿಕೊಳ್ಳಬೇಕು.
‘ಸಂಚಾರಿ ಜಾಹೀರಾತು’ಗಳನ್ನು ಪ್ರದರ್ಶಿಸಲು ಆಯಾ ನಗರ ಪಾಲಿಕೆಗಳಿಂದ ಆನ್‌ಲೈನ್‌ನಲ್ಲಿ ಪೂರ್ವಾನುಮತಿ ಪಡೆದುಕೊಳ್ಳಬೇಕು. ಪ್ರದರ್ಶನದ ಅವಧಿ, ಉದ್ದೇಶ, ವಾಹನ ಸಂಖ್ಯೆ, ವಾಹನಗಳ ಪಟ್ಟಿಯನ್ನು ನೀಡಿ, ಜಾಹೀರಾತು ಪ್ರದರ್ಶನಕ್ಕೆ ನಗರ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು. ಬಿಎಂಟಿಸಿ ಸೇರಿದಂತೆ ಎಲ್ಲ ವಾಹನಗಳಲ್ಲಿ ಪ್ರದರ್ಶಿಸುವ ವಾಹನಗಳಿಗೆ ಅನುಗುಣವಾದ ಶುಲ್ಕ ಪಾವತಿಸಬೇಕು.
ಜಿಬಿಎ ಮುಖ್ಯ ಆಯುಕ್ತ– ಅಧ್ಯಕ್ಷ; ಬೆಂಗಳೂರು ನಗರ ಪೊಲೀಸ್ ಕಮಿಷನರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ– ಸದಸ್ಯರು; ಜಿಬಿಎ ಮುಖ್ಯ ಆಯುಕ್ತರು ಸೂಚಿಸುವ ವಿಶೇಷ ಆಯುಕ್ತ– ಸದಸ್ಯ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ– ಅಧ್ಯಕ್ಷ; ಜಿಬಿಎ ಮುಖ್ಯ ಆಯುಕ್ತ, ಜಾಹೀರಾತು ಉದ್ಯಮದ ಸಂಘಟನೆಯ ಪ್ರತಿನಿಧಿ, ಯಾವುದಾದರೂ ಎರಡು ನಗರ ಪಾಲಿಕೆ ಆಯುಕ್ತರು (ಪ್ರತಿ ವರ್ಷ ಬದಲು)– ಸದಸ್ಯರು; ಜಿಬಿಎ ಮುಖ್ಯ ಆಯುಕ್ತರು ಸೂಚಿಸುವ ವಿಶೇಷ ಆಯುಕ್ತ– ಸದಸ್ಯ ಕಾರ್ಯದರ್ಶಿ
ಐದೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ ಪ್ರದೇಶ ಅಥವಾ ವಾಣಿಜ್ಯ ಪ್ರದೇಶದಲ್ಲಿರುವ ನಿವೇಶನಗಳು ‘ಬಿ’ ಖಾತಾ ಹೊಂದಿದ್ದರೆ ಅಥವಾ ಯಾವುದೇ ರೀತಿಯ ಖಾತಾ ಹೊಂದಿರದಿದ್ದರೆ ಜಾಹೀರಾತು ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ. ಖಾತಾ ಇಲ್ಲದ ಹಾಗೂ ತೆರಿಗೆ ಪಾವತಿಸದ ಆಸ್ತಿಯಲ್ಲಿರುವ ಜಾಹೀರಾತನ್ನು ನಗರ ಪಾಲಿಕೆ ತೆರವುಗೊಳಿಸುತ್ತದೆ. ಅಲ್ಲದೆ, ಜಾಹೀರಾತು ಪ್ರದರ್ಶಿಸಿದ ಅವಧಿಗೆ ನಿಯಮದಲ್ಲಿ ತಿಳಿಸಲಾಗಿರುವ ಶುಲ್ಕದ ದುಪ್ಪಟ್ಟು ದಂಡವನ್ನೂ ವಿಧಿಸಲಾಗುತ್ತದೆ.
ಕುಮಾರಕೃಪಾ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್‌ನಿಂದ ಶಿವಾನಂದ ವೃತ್ತ.
ರಾಜಭವನ ರಸ್ತೆ, ಹೈಗ್ರೌಂಡ್ಸ್‌ನಿಂದ ಮಿನ್ಸ್ಕ್ ಸ್ಕ್ವೇರ್.
ಸ್ಯಾಂಕಿ ರಸ್ತೆ, ಹೈಗ್ರೌಂಡ್ಸ್‌ನಿಂದ ವಿಂಡ್ಸರ್ ಹಿಲ್ಡ್ ಸಿಗ್ನಲ್.
ಅಂಬೇಡ್ಕರ್ ವೀಧಿ, ಕೆ.ಆರ್. ವೃತ್ತದಿಂದ ಇನ್‌ಫೆಂಟ್ರಿ ಜಂಕ್ಷನ್.
ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್. ವೃತ್ತದಿಂದ ಎಸ್‌ಬಿಐ ವೃತ್ತ (ಕೆ.ಜಿ ರಸ್ತೆ)
ಚಾಲುಕ್ಯ ವೃತ್ತ
ಮಹಾರಾಣಿ ಕಾಲೇಜ್ ರಸ್ತೆ/ ಶೇಷಾದ್ರಿ ರಸ್ತೆ
ಕೆ.ಆರ್. ವೃತ್ತ
ಕಬ್ಬನ್ ಪಾರ್ಕ್ ಹಾಗೂ ಲಾಲ್‌ಬಾಗ್ ಆವರಣ
ನೃಪತುಂಗ ರಸ್ತೆ, ಕೆ.ಆರ್. ವೃತ್ತದಿಂದ ಪೊಲೀಸ್ ಕಾರ್ನರ್ ಜಂಕ್ಷನ್
ಪ್ಯಾಲೇಸ್ ರಸ್ತೆ, ಎಸ್‌ಬಿಐ ವೃತ್ತದಿಂದ ಚಾಲುಕ್ಯ ವೃತ್ತ
ದೇವಾಲಯ, ಮಸೀದಿ, ಗುರುದ್ವಾರ, ಚರ್ಚ್ ಮತ್ತು ಇತರ ಧಾರ್ಮಿಕ ಸ್ಥಳಗಳಿಂದ ನೂರು ಮೀಟರ್ ಒಳಗೆ, ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್, ಸಂವಹನ ಗೋಪುರ, ವಿಶ್ವ ಪಾರಂಪರಿಕ ತಾಣ, ರಾಷ್ಟ್ರೀಯ ಉದ್ಯಾನಗಳು, ಅರಣ್ಯ, ಜಲಮೂಲ, ಜಲಮಂಡಳಿಯ ನೀರು ಸಂಗ್ರಹಾಗಾರ, ಸ್ಮಾರಕಗಳಿರುವ 50 ಮೀಟರ್ ಒಳಗೆ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲಾಗಿದೆ.
ವಾಹನ ಚಾಲಕರ ಏಕಾಗ್ರತೆಗೆ ಭಂಗವನ್ನು ಉಂಟು ಮಾಡುವ ಜಾಹೀರಾತು, ಸಂಚಾರ ಸಿಗ್ನಲ್ ದೀಪಗಳ ಬಣ್ಣ, ನಗರದ ವಿರೂಪಕ್ಕೆ ಕಾರಣವಾಗಬಹುದಾದ ಭಿತ್ತಿಪತ್ರ, ಗೀಚುಬರಹ, ಮರದ ಮೇಲೆ ಅಂಟಿಸಲಾದ, ಮೊಳೆ ಹೊಡೆದ, ಕಟ್ಟಿದ, ಲಗತ್ತಿಸಿದ, ಜೋಡಿಸಿದ ಜಾಹೀರಾತನ್ನು ನಿಷೇಧಿಸಲಾಗಿದೆ. ಹೈಮಾಸ್ಟ್, ಬೀದಿ ದೀಪ, ವಿದ್ಯುತ್ ಕಂಬಗಳ ಮೇಲೆ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.