ಡಿಕೆಶಿ
ಮೈಸೂರು: ‘ಬಿಬಿಎಂಪಿಯನ್ನು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಎಂದು ಮಾಡಿದ್ದೇವೆ. ಹೊಸ ಬಡಾವಣೆಗಳನ್ನು ಸೇರಿಸುವುದಿಲ್ಲ. ಈಗಿರುವ ವ್ಯಾಪ್ತಿಯಲ್ಲೇ ಜಿಬಿಎ ಅನುಷ್ಠಾನಗೊಳ್ಳುತ್ತದೆ. ಈ ವ್ಯಾಪ್ತಿ ಇಟ್ಟುಕೊಂಡೇ ಚುನಾವಣೆ ನಡೆಸುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಶೀಘ್ರದಲ್ಲೇ ಸರ್ವ ಪಕ್ಷ ಸಭೆಯನ್ನೂ ಕರೆಯುತ್ತೇನೆ. ಯಾವ ರೀತಿಯಲ್ಲಿ ಭಾಗ ಮಾಡಬೇಕು ಎಂಬುದನ್ನೂ ಕೇಳುತ್ತೇನೆ’ ಎಂದರು.
‘ಮೀಸಲಾತಿ ನಿಗದಿಪಡಿಸಿ, ಜಿಬಿಎಗೆ ಅತಿ ಶೀಘ್ರದಲ್ಲೇ ಚುನಾವಣೆ ಮಾಡುತ್ತೇವೆ. 4 ತಿಂಗಳಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನೆಲ್ಲಾ ಮಾಡುತ್ತೇವೆ. ಚುನಾವಣೆ ವಿಳಂಬ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ನಮ್ಮ ಸ್ವಂತದ್ದೇನಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುತ್ತೇವೆ’ ಎಂದು ಹೇಳಿದರು.
‘ಬೆಂಗಳೂರನ್ನು ಗ್ರೇಟರ್ ಅಲ್ಲ, ಕ್ವಾರ್ಟರ್ ಬೆಂಗಳೂರು ಮಾಡಿದ್ದಾರೆ’ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ಕ್ವಾರ್ಟರ್ ಎನ್ನಲಿ, ಫುಲ್ ಬೆಂಗಳೂರು ಎಂದಾದರೂ ಹೇಳಲಿ. ನಾವು ತಲೆಕಡೆಸಿಕೊಳ್ಳುವುದಿಲ್ಲ’ ಎಂದರು.
‘ವಿರೋಧ ಪಕ್ಷದವರಾಗಿ ಅವರು ಅಷ್ಟೂ ವಿರೋಧ ಮಾಡದಿದ್ದರೆ ಹೇಗೆ ಹೇಳಿ? ನಿಜವಾಗಲೂ ವಿರೋಧಿಸಬೇಕಿದ್ದರೆ ವಿಧಾನಮಂಡಲ ಅಧಿವೇಶನದಲ್ಲೇ ಹೇಳಬಹುದಿತ್ತು. ಅಲ್ಲಿ ಬೆಂಬಲಿಸಿ ಈಗ ಈ ರೀತಿ ಹೇಳಿದರೆ ಅದರಲ್ಲಿ ಅರ್ಥವಿದೆಯೇ?’ ಎಂದು ಕೇಳಿದರು.
‘ಅವರೂ ಬೆಂಗಳೂರಿನ ಒಂದು ಭಾಗ. ಅಲ್ಲಿನ ಪ್ರಮುಖ ನಾಯಕ. ಅವರಿಗೆ ಕೊಡಬೇಕಾದ ಗೌರವ ಕೊಡುತ್ತೇವೆ. ಅವರೆಲ್ಲರ ಸಲಹೆಗಳನ್ನು ಮತ್ತೊಂದು ಬಾರಿ ಪಡೆಯುತ್ತೇನೆ’ ಎಂದು ತಿಳಿಸಿದರು.
‘ರಾಮನಗರ ಹೆಸರು ಬದಲಾವಣೆ ಮಾಡುವ ವಿಷಯದಲ್ಲಿ ವಿಳಂಬವೇನೂ ಆಗಿಲ್ಲ. ಅದಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳೂ ನಡೆಯುತ್ತಿವೆ. ಶುಭ ಗಳಿಗೆ–ಮುಹೂರ್ತ ಬರಬೇಕು. ಶೀಘ್ರದಲ್ಲೇ ಬರಲಿದೆ. ಆಗ ಎಲ್ಲವನ್ನೂ ಮಾತನಾಡುತ್ತೇನೆ’ ಎಂದರು.
‘ಪಕ್ಷಗಳಿಗಿಂತ, ವ್ಯಕ್ತಿಗಳಿಗಿಂತ ದೇಶ ದೊಡ್ಡದು. ಪಾಕಿಸ್ತಾನದ ವಿರುದ್ಧ ಹೋರಾಟದ ವಿಷಯುದಲ್ಲಿ ಏನೇ ತೀರ್ಮಾನ ಕೈಗೊಂಡರೂ ನಾವು ಅದಕ್ಕೆ ಬದ್ಧವಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದೇವೆ. ಯಾವ ರಾಷ್ಟ್ರಕ್ಕೂ ಮಣಿಯಬಾರದೆಂದೂ ಹೇಳಿದ್ದೇವೆ. ಈಗ ಅವರು ಏನೇನು ಮಾಡಿದ್ದಾರೆ ಎಂಬುದನ್ನು ನಮ್ಮ ಪಕ್ಷದ ನಾಯಕರು ಈಗಾಗಲೇ ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಸರ್ವಪಕ್ಷ ಸಭೆ ಹಾಗೂ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದೇವೆ. ಸಂಸದರೂ ಸಹಿ ಮಾಡಿ ಸಲ್ಲಿಸುತ್ತಿದ್ದಾರೆ. ಏನೇನು ನಡೆದಿದೆಯೋ ಅದೆಲ್ಲವನ್ನೂ ಎಲ್ಲರಿಗೂ ಹೇಳಬೇಕಲ್ಲವೇ?’ ಎಂದು ಕೇಳಿದರು.
‘ಹೊರ ದೇಶದವರೆಲ್ಲ ನಮ್ಮ ಸ್ವಾಭಿಮಾನಕ್ಕೆ ಕೈಹಾಕುತ್ತಿದ್ದಾರೆ. ಇಂದಿರಾಗಾಂಧಿ ಕಾಲದಿಂದಲೂ ನಾವು ಯಾರ ಹಂಗಿನಲ್ಲೂ ಕೆಲಸ ಮಾಡಿರಲಿಲ್ಲ. ಅಧಿವೇಶನದಲ್ಲಿ ಚರ್ಚಿಸುವಂತೆ ಕೇಳುವುದು ನಮ್ಮ ಹಕ್ಕು, ಕೇಳುತ್ತಿದ್ದೇವೆ’ ಎಂದು ತಿಳಿಸಿದರು.
‘ಈ ವರ್ಷ ನಿಮಗೆ ದೊಡ್ಡ ಹುದ್ದೆ ಸಿಗುತ್ತದೆಯೇ’ ಎಂಬ ಪ್ರಶ್ನೆಗೆ, ‘ನಿಮ್ಮೆಲ್ಲರ ಆಶೀರ್ವಾದವಿರಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.