ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ವಾರ್ಡ್ ನಂಬರ್ ಬದಲು; ಆಕ್ಷೇಪಕ್ಕಿಲ್ಲ ಮಣೆ

ಮಂಗಲ್‌ ಪಾಂಡೆ, ರಾಣಿ ಝಾನ್ಸಿ, ಸುಭಾಷ್‌ ಚಂದ್ರ ಬೋಸ್‌, ಅನಿಬೆಸೆಂಟ್‌ ವಾರ್ಡ್‌ ಹೆಸರು ಬದಲು

ಆರ್. ಮಂಜುನಾಥ್
Published 21 ನವೆಂಬರ್ 2025, 1:30 IST
Last Updated 21 ನವೆಂಬರ್ 2025, 1:30 IST
   

ಬೆಂಗಳೂರು: ಐದು ನಗರ ಪಾಲಿಕೆಗಳ ವಾರ್ಡ್‌ಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಅವುಗಳ ನಂಬರ್‌ಗಳು ಅದಲು ಬದಲಾಗಿರುವುದು ಬಿಟ್ಟರೆ, ನಾಗರಿಕರು, ಜನಪ್ರತಿನಿಧಿಗಳ ಆಕ್ಷೇಪಣೆಗೆ ನಗರಾಭಿವೃದ್ಧಿ ಇಲಾಖೆ ಮಣೆ ಹಾಕಿಲ್ಲ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯಂತೆ ಗ್ರೇಟರ್‌ ಬೆಂಗಳೂರ ಪ್ರಾಧಿಕಾರ ಹಾಗೂ ಐದು ನಗರ ಪಾಲಿಕೆಗಳನ್ನು ರಚಿಸಿ, 2025ರ ಸೆಪ್ಟೆಂಬರ್ 2ರಂದು ಅಧಿಸೂಚಿಸಲಾಗಿತ್ತು. ಸೆಪ್ಟೆಂಬರ್‌ 30ರಂದು ನಗರ ಪಾಲಿಕೆಗಳ ವಾರ್ಡ್‌ಗಳನ್ನು ಮರು ವಿಂಗಡಿಸಿ ಕರಡು ಅಧಿಸೂಚನೆಯಾಗಿತ್ತು. ನ.1ರಂದು ಅಂತಿಮ ಅಧಿಸೂಚನೆಯಾಗಬೇಕಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿ 15 ದಿನ ಅವಕಾಶವನ್ನು ಸರ್ಕಾರ ಪಡೆದುಕೊಂಡಿತ್ತು.

ಅದರಂತೆ, ಐದೂ ನಗರ ಪಾಲಿಕೆಗಳ ವಾರ್ಡ್‌ಗಳನ್ನು ಅಂತಿಮಗೊಳಿಸಿ ನ.19ರಂದು ಅಧಿಸೂಚನೆ ಹೊರಡಿಸಿದೆ. ಆದರೆ, ನಾಗರಿಕರು ಹಾಗೂ ಜನಪ್ರತಿನಿಧಿಗಳು ಸಲ್ಲಿಸಿದ್ದ ಆಕ್ಷೇಪಗಳನ್ನು ಪರಿಗಣಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ADVERTISEMENT

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಒಂದು ವಾರ್ಡ್‌ ಅನ್ನು ಹೆಚ್ಚಿಸಿರುವುದರಿಂದ ಒಟ್ಟಾರೆ ವಾರ್ಡ್‌ಗಳ ಸಂಖ್ಯೆ 368ರಿಂದ 369ಕ್ಕೆ ಏರಿದೆ. ಇನ್ನು ಐದೂ ನಗರ ಪಾಲಿಕೆಗಳ ವಾರ್ಡ್‌ಗಳ ಗಡಿಯನ್ನು ಕರಡಿನಲ್ಲಿರುವಂತೆಯೇ ಬಹುತೇಕ ಉಳಿಸಿಕೊಂಡಿದೆ. ವಾರ್ಡ್‌ಗಳ ನಂಬರ್‌ ಅನ್ನು ಅದಲು –ಬದಲು ಮಾಡಿದ್ದು, ಒಂದೆರಡು ವಾರ್ಡ್‌ಗಳ ಹೆಸರನ್ನು ಮಾತ್ರ ಬದಲಿಸಲಾಗಿದೆ.

ದಕ್ಷಿಣ ನಗರ ಪಾಲಿಕೆಯಲ್ಲಿ ಜಯನಗರದಲ್ಲಿ ಮಾರೇನಹಳ್ಳಿ– ದಕ್ಷಿಣ ವಾರ್ಡ್‌ ಹೊಸದಾಗಿ ಹೆಸರು ಪಡೆದುಕೊಂಡಿದ್ದರೆ, ಉತ್ತರ ನಗರ ಪಾಲಿಕೆಯಲ್ಲಿ ಚೌಡೇಶ್ವರಿ ಬದಲು ರಾಜ ಕೆಂಪೇಗೌಡ ವಾರ್ಡ್‌ ಎಂದಾಗಿದೆ. ‘ಅನಿಬೆಸೆಂಟ್‌’ ಹೆಸರು ಕೈಬಿಡಲಾಗಿದೆ.

ಪಶ್ಚಿಮ ನಗರ ಪಾಲಿಕೆಯಲ್ಲಿ ಮಂಗಲ್‌ ಪಾಂಡೆ, ರಾಣಿ ಝಾನ್ಸಿ ಹೆಸರನ್ನು ಕೈಬಿಡಲಾಗಿದೆ. ಬಿನ್ನಿಪೇಟೆ ಪ್ರದೇಶಕ್ಕೆ ಡಾ. ವಿಷ್ಣುವರ್ಧನ್‌ ವಾರ್ಡ್‌ ಎಂದು ಹೆಸರಿಸಲಾಗಿದೆ. ಇದೇ ನಗರ ಪಾಲಿಕೆಯಲ್ಲಿ ಡಾ. ರಾಜ್‌ಕುಮಾರ್‌ ವಾರ್ಡ್‌, ಡಾ. ಪುನೀತ್‌ ರಾಜ್‌ಕುಮಾರ್‌ ವಾರ್ಡ್‌ ಇದೆ. ಪೂರ್ವ ನಗರ ಪಾಲಿಕೆಯಲ್ಲಿ ‘ತಲಕಾವೇರಿ’, ಉತ್ತರ ನಗರ ಪಾಲಿಕೆಯಲ್ಲಿ ‘ಅರುಣಾ ಆಸಿಫ್‌ ಅಲಿ’ ವಾರ್ಡ್‌ ಹೆಸರು ಬದಲಾಯಿಸಲಾಗಿದೆ.

ಚುನಾವಣೆ ನಡೆಯುತ್ತಾ?

ಐದು ನಗರ ಪಾಲಿಕೆಗಳ ವಾರ್ಡ್‌ಗಳನ್ನು ಅಂತಿಮಗೊಳಿಸಿರುವ ಅಧಿಸೂಚನೆ ಹೊರಬಿದ್ದಿದೆ. ಆದರೆ ನಿಜಕ್ಕೂ 2026ರ ಫೆಬ್ರುವರಿಯಲ್ಲಿ ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಾ ಎಂಬ ಪ್ರಶ್ನೆ ಟಿಕೆಟ್‌ ಆಕಾಂಕ್ಷಿಗಳಲ್ಲಿ ದಟ್ಟವಾಗಿ ಕಾಡುತ್ತಿದೆ. ವಾರ್ಡ್‌ವಾರು ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯುಕ್ತ ಜನವರಿ 29ಕ್ಕೆ ಪ್ರಕಟಿಸುವ ವೇಳಾಪಟ್ಟಿ ಇದೆ. ಅದರೊಳಗೆ ವಾರ್ಡ್‌ಗಳಿಗೆ ಮೀಸಲಾತಿಯನ್ನು ನಿಗದಿಪಡಿ ಕರಡು ಹೊರಡಿಸಿ ಅಂತಿಮಗೊಳಿಸಬೇಕಿದೆ. ಆದರೆ ‘ಇದೆಲ್ಲ ಸಮಯಕ್ಕೆ ಅನುಗುಣವಾಗಿ ನಡೆಯುವುದಿಲ್ಲ. ಆ ಸಂದರ್ಭದಲ್ಲಿ ಕಾರಣಗಳು ಬೇರೆಬೇರೆಯಾಗುತ್ತವೆ’ ಎಂಬುದು ಪಾಲಿಕೆಗೆ ಆಯ್ಕೆಬಯಸುತ್ತಿರುವ ಪ್ರಮುಖ ಪಕ್ಷಗಳ ಮಾತುಗಳು.

‘ನಮ್ಮ ಶಾಸಕರಿಗ್ಯಾರಿಗೂ ಪಾಲಿಕೆಗೆ ಚುನಾವಣೆ ನಡೆಯುವುದು ಬೇಡ. ಹಿಂದಿನ ಸರ್ಕಾರ ಹಾಗೂ ಈಗಿನ ಸರ್ಕಾರದ ಸಚಿವರಿಗೂ ಅದರ ಅಗತ್ಯವಿಲ್ಲ. ನ್ಯಾಯಾಲಯಗಳು ಸ್ಪಷ್ಟ ಆದೇಶ ನೀಡದೆ ಹೋದರೆ ಚುನಾವಣೆ ನಡೆಯುವುದಿಲ್ಲ’ ಎಂದು ಮಾಜಿ ಕಾರ್ಪೊರೇಟರ್‌ಗಳು ಅಭಿಪ್ರಾಯಪಡುತ್ತಾರೆ.

‘ಕೆಂಗೇರಿ ಹೆಸರು ಮಾಯ’

‘ಹೆಮ್ಮಿಗೆಪುರ’ದ ಬದಲು ಇತಿಹಾಸ ಪ್ರಸಿದ್ಧ ‘ಕೆಂಗೇರಿ ಕೋಟೆ’ ಅಥವಾ ಸೋಮೇಶ್ವರ ದೇವಸ್ಥಾನ ಎಂದು ಹೆಸರಿಡಲು ಕೋರಲಾಗಿತ್ತು. ಸ್ಥಳೀಯ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರೂ ಪತ್ರ ಬರೆದಿದ್ದರು. ಆದರೆ ಯಾವುದೇ ಬದಲಾವಣೆ ಮಾಡದೆ ಕೆಂಗೇರಿಯ ಹೆಸರನ್ನೇ ಕೈಬಿಡಲಾಗಿದೆ ಎಂದು  ಕೆಂಗೇರಿ ಕೋಟೆ ಯುವಕ ಮಂಡಳಿ ಜನಾಭಿಮಾನ ಮಹಿಳಾ ವೇದಿಕೆ ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆಯ ಸದಸ್ಯರು ದೂರಿದರು.  ‘ಸ್ಥಳೀಯರ ಮನವಿ ಹಾಗೂ ಆಕ್ಷೇಪಣೆಗಳಿಗೆ ಮನ್ನಣೆ ನೀಡದೆ ವಾರ್ಡ್‌ ಹೆಸರನ್ನು ಅಂತಿಮಗೊಳಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.