ADVERTISEMENT

Greater Bengaluru | ಬಿಬಿಎಂಪಿ: ಐದು ನಗರ ಪಾಲಿಕೆಗಳಾಗಿ ಹೋಳು

ಆರ್. ಮಂಜುನಾಥ್
Published 20 ಜುಲೈ 2025, 0:30 IST
Last Updated 20 ಜುಲೈ 2025, 0:30 IST
<div class="paragraphs"><p>ಗ್ರೇಟರ್ ಬೆಂಗಳೂರು - ಐದು ನಗರ ಪಾಲಿಕೆಗಳ ವ್ಯಾಪ್ತಿ</p></div>

ಗ್ರೇಟರ್ ಬೆಂಗಳೂರು - ಐದು ನಗರ ಪಾಲಿಕೆಗಳ ವ್ಯಾಪ್ತಿ

   
‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024’ l ‘ಗ್ರೇಟರ್‌ ಬೆಂಗಳೂರು ಪ್ರದೇಶ’ ವ್ಯಾಪ್ತಿಯಲ್ಲೇ ಹೊಸ ಪಾಲಿಕೆಗಳ ರಚನೆ l ಆಕ್ಷೇಪಣೆಗೆ 30ದಿನ ಅವಕಾಶ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು(ಬಿಬಿಎಂಪಿ) ಐದು ನಗರ ಪಾಲಿಕೆಗಳಾಗಿ ವಿಂಗಡಿಸಿ, ರಾಜ್ಯ ಸರ್ಕಾರ ಶನಿವಾರ ಕರಡು ಅಧಿಸೂಚನೆ ಹೊರಡಿಸಿದೆ.

‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ– 2024’ (ಜಿಬಿಜಿಎ) ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯನ್ನು ‘ಗ್ರೇಟರ್‌ ಬೆಂಗಳೂರು ಪ್ರದೇಶ’ (ಜಿಬಿಎ) ಎಂದು ಗುರುತಿಸಿ 2025ರ ಮೇ 15ರಂದು ಸರ್ಕಾರ ಅಧಿಸೂಚಿಸಿತ್ತು. ‘ಗ್ರೇಟರ್‌ ಬೆಂಗಳೂರು ಪ್ರದೇಶ’ದಲ್ಲೇ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದ್ದು, ನಾಗರಿಕರು ಆಕ್ಷೇಪಣೆ ಸಲ್ಲಿಸಲು 30 ದಿನಗಳ ಅವಕಾಶ ನೀಡಲಾಗಿದೆ.

ADVERTISEMENT

ಜಿಬಿಜಿಎ ಕಾಯ್ದೆಯ ಪ್ರಕರಣ 4ರ ಉಪ ಪ್ರಕರಣ (1) ಹಾಗೂ ಪ್ರಕರಣ 7ರ ಉಪ ಪ್ರಕರಣದಡಿ (1) ಅಧಿಕಾರ ಚಲಾಯಿಸಿರುವ ಸರ್ಕಾರ, ಜನಸಂಖ್ಯೆ, ವಿಸ್ತೀರ್ಣ, ಜನಸಂಖ್ಯಾ ಸಾಂದ್ರತೆ, ಉತ್ಪತ್ತಿಯಾಗುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗ ಪ್ರಮಾಣ, ಆರ್ಥಿಕ ಪ್ರಾಮುಖ್ಯವನ್ನು ಪರಿಗಣಿಸಿ ಐದು ನಗರ ಪಾಲಿಕೆಗಳನ್ನು ರಚಿಸಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಎಂದು ಹೆಸರಿಸಲಾಗಿದೆ.

ಸಾರ್ವಜನಿಕರು ಆಕ್ಷೇಪಣೆ ಅಥವಾ ಸಲಹೆಗಳನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸ ಸೌಧ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಿಧಾನಸಭೆಯಂತೆ ವಿಂಗಡಣೆ ಇಲ್ಲ:

ಬಿಬಿಎಂಪಿ ವ್ಯಾಪ್ತಿಯಲ್ಲಿ 225 ವಾರ್ಡ್‌ಗಳನ್ನು ಮರುರಚಿಸಿ 2023ರ ಸೆಪ್ಟೆಂಬರ್‌ 25ರಂದು ಸರ್ಕಾರ ಅಧಿಸೂಚಿಸಿತ್ತು. ಆದರೆ, ಇದೀಗ ಹೊಸ ಐದು ನಗರ ಪಾಲಿಕೆಗಳನ್ನು ಹಿಂದೆ ಚುನಾವಣೆ ನಡೆದಿದ್ದ 198 ವಾರ್ಡ್‌ಗಳಂತೆ ವಿಂಗಡಿಸಲಾಗಿದೆ. ಆನೇಕಲ್‌ ವಿಧಾನಸಭೆ ಕ್ಷೇತ್ರದಲ್ಲಿರುವ ಕೂಡ್ಲು ವಾರ್ಡ್‌ ಹೊಸ ನಗರ ಪಾಲಿಕೆಗಳ ವ್ಯಾಪ್ತಿಯಿಂದ ಕೈಬಿಡಲಾಗಿದೆ. ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಪದ್ಮನಾಭನಗರ, ಯಶವಂತಪುರ, ಮಹದೇವಪುರ ವಿಧಾನಸಭೆ ವ್ಯಾಪ್ತಿಯ ವಾರ್ಡ್‌ ಪ್ರದೇಶಗಳು ಎರಡು ಹೊಸ ನಗರ ಪಾಲಿಕೆಗಳ ವ್ಯಾಪ್ತಿಗೆ ಸೇರಿಕೊಂಡಿವೆ.

2025ರ ಆಸ್ತಿ ತೆರಿಗೆ ಸಂಗ್ರಹವನ್ನು ಐದು ನಗರ ಪಾಲಿಕೆಗಳಿಗೆ ವಿಂಗಡಿಸಿದರೆ, ಮಹದೇವಪುರ ಹಾಗೂ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಲಿರುವ ಪೂರ್ವ ನಗರ ಪಾಲಿಕೆಗೆ ಅತಿಹೆಚ್ಚು (₹912 ಕೋಟಿ) ಸಂಗ್ರಹವಿರಲಿದೆ. ಉತ್ತರ ನಗರ ಪಾಲಿಕೆಗೆ ಅತಿ ಕಡಿಮೆ (₹543 ಕೋಟಿ) ತೆರಿಗೆ ಸಂಗ್ರಹವಾಗಲಿದೆ.

712 ಚದರ ಕಿ.ಮೀಯಲ್ಲಿ ರಚನೆಯಾಗಲಿರುವ ಐದು ನಗರ ಪಾಲಿಕೆಗಳನ್ನು ಒಂದು ಚದರ ಕಿ.ಮೀಗೆ ಸರಾಸರಿ 20,225 ಜನಸಂಖ್ಯೆ ಸಾಂದ್ರತೆ ಬರುವಂತೆ ವಿಂಗಡಿಸಲಾಗಿದೆ. ಕೇಂದ್ರ ನಗರ ಪಾಲಿಕೆಯಲ್ಲಿ ಅತಿಹೆಚ್ಚು ಜನಸಂಖ್ಯೆ ಸಾಂದ್ರತೆ (32,051) ಇರಲಿದ್ದು, ಪೂರ್ವ ನಗರ ಪಾಲಿಕೆಯಲ್ಲಿ ಅತಿ ಕಡಿಮೆ ಜನಸಂಖ್ಯೆ ಸಾಂದ್ರತೆ (7,738) ಇರಲಿದೆ. ಪ್ರತಿ ನಗರ ಪಾಲಿಕೆಗಳ ಗಡಿಯಲ್ಲಿ ಅತಿದೊಡ್ಡ ರಸ್ತೆಯೇ ಇರುವಂತೆ ವಿಂಗಡಣೆ ಮಾಡಲಾಗಿದೆ.

ಪಾಲಿಕೆಗಳ ಹೆಸರೇನು?

ಬೆಂಗಳೂರು ಉತ್ತರ ನಗರ ಪಾಲಿಕೆ | ಬೆಂಗಳೂರು ದಕ್ಷಿಣ ನಗರ ಪಾಲಿಕೆ | ಬೆಂಗಳೂರು ಪೂರ್ವ ನಗರ ಪಾಲಿಕೆ | ಬೆಂಗಳೂರು ಪಶ್ಚಿಮ ನಗರ ಪಾಲಿಕೆ | ಬೆಂಗಳೂರು ಕೇಂದ್ರ ನಗರ ಪಾಲಿಕೆ

ಜನಸಂಖ್ಯೆಯಲ್ಲಿ ಪಶ್ಚಿಮ ದೊಡ್ಡದು

ಜಿಲ್ಲಾ ಚುನಾವಣಾ ಅಧಿಕಾರಿಯವರು ವಿಧಾನಸಭೆ ಕ್ಷೇತ್ರಗಳ ಜನಸಂಖ್ಯೆಯ ಪ್ರಕಾರ, 2023ರಲ್ಲಿ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತರು ಅಂದಾಜಿಸಿರುವ ಜನಸಂಖ್ಯೆಯಂತೆ ಹೊಸ ನಗರ ಪಾಲಿಕೆಗಳನ್ನು ವಿಂಗಡಿಸಲಾಗಿದೆ.

ಜಿಬಿಜಿಎ ಕಾಯ್ದೆಯಂತೆ ಪ್ರತಿ ನಗರ ಪಾಲಿಕೆಯಲ್ಲಿ ಕನಿಷ್ಠ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರಬೇಕು. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಅತಿಹೆಚ್ಚು ಜನಸಂಖ್ಯೆಯನ್ನು (45 ಲಕ್ಷ) ಹೊಂದಲಿದೆ. ಪೂರ್ವ ನಗರ ಪಾಲಿಕೆಯಲ್ಲಿ ಅತಿ ಕಡಿಮೆ ಜನಸಂಖ್ಯೆಯಿದೆ (13 ಲಕ್ಷ). ಅತಿ ಕಡಿಮೆ ಜನಸಂಖ್ಯೆ ಹೊಂದಲಿದ್ದರೂ ಬೆಂಗಳೂರು ಪೂರ್ವ ನಗರ ಪಾಲಿಕೆ ಅತಿ ಹೆಚ್ಚಿನ ವಿಸ್ತೀರ್ಣ (168 ಚದರ ಕಿ.ಮೀ) ಹೊಂದಲಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ಅತಿ ಕಡಿಮೆ ವಿಸ್ತೀರ್ಣ (78 ಚದರ ಕಿ.ಮೀ) ವ್ಯಾಪ್ತಿಯಲ್ಲಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.