ಬೆಂಗಳೂರು: ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ 5ಕ್ಕೆ ಇಳಿಕೆ ಮಾಡಿರುವುದರಿಂದ ಸೆ.22ರಿಂದ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ‘ನಂದಿನಿ’ಯ ವಿವಿಧ ಉತ್ಪನ್ನಗಳ ದರ ಕಡಿಮೆಯಾಗಲಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಜಿಎಸ್‌ಟಿ ಕಡಿಮೆ ಮಾಡಲು ಮುಂದಾಗಿದ್ದು, ಮೊಸರಿನ ದರ ಲೀಟರ್‌ಗೆ ₹4ರವರೆಗೆ ಕಡಿಮೆ ಆಗುವ ನಿರೀಕ್ಷೆಯಿದೆ.
ದರ ಇಳಿಕೆ ಸಂಬಂಧ ಕೆಎಂಎಫ್‌ನ ಹಿರಿಯ ಅಧಿಕಾರಿಗಳ ಸಭೆ ಶುಕ್ರವಾರ ನಡೆಯಲಿದ್ದು, ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೊಳಿಸುವಂತೆ ಮಾರಾಟಗಾರರಿಗೆ ಸೂಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
‘ಜಿಎಸ್‌ಟಿ ಇಳಿಕೆ ಸಂಬಂಧ ಸೂಚನೆ ಬಂದಿದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಆದೇಶ ಜಾರಿ ಮಾಡಲಾಗುತ್ತದೆʼ ಎಂದು ಮಹಾಮಂಡಳಿ ತಿಳಿಸಿದೆ.
2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸಲಾಗಿತ್ತು. ಇದಾದ ಬಳಿಕ 2022ರಲ್ಲಿ ಜಿಎಸ್‌ಟಿಯನ್ನು ಶೇ 12ಕ್ಕೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಹೊರೆ ಕಡಿಮೆಯಾಗಲಿದೆ.
ಸೆ.22ರಿಂದಲೇ ನಂದಿನಿ ಉತ್ಪನ್ನಗಳ ದರ ಶೇ 7ರಷ್ಟು ಕಡಿಮೆಯಾಗಲಿದೆ. ಪರಿಷ್ಕೃತ ದರ ಜಾರಿ ಸಂಬಂಧ ಆದೇಶ ಹೊರಡಿಸಲಾಗುತ್ತದೆ.ಬಿ.ಶಿವಸ್ವಾಮಿ ವ್ಯವಸ್ಥಾಪಕ ನಿರ್ದೇಶಕ ಕೆಎಂಎಫ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.