ADVERTISEMENT

Guarantee Scheme: ಮಹಿಳೆಯರ ಉದ್ಯೋಗ ಪ್ರಮಾಣ ಹೆಚ್ಚಿಸಿದ ‘ಶಕ್ತಿ’

ಅಧ್ಯಯನ ವರದಿ ನೀಡಿದ ಸಸ್ಟೈನೇಬಲ್‌ ಮೊಬಿಲಿಟಿ ನೆಟ್‌ವರ್ಕ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 16:03 IST
Last Updated 25 ಜುಲೈ 2025, 16:03 IST
ಶಕ್ತಿ ಯೋಜನೆ
ಶಕ್ತಿ ಯೋಜನೆ   

ಬೆಂಗಳೂರು: ಶಕ್ತಿ ಯೋಜನೆಯಡಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಓಡಾಡಲು ಆರಂಭಿಸಿದ ಬಳಿಕ, ಬೆಂಗಳೂರು, ಹುಬ್ಬಳ್ಳಿ–ಧಾರವಾಡದಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ ಎಂದು ಸಸ್ಟೈನೇಬಲ್‌ ಮೊಬಿಲಿಟಿ ನೆಟ್‌ವರ್ಕ್ ನಡೆಸಿದ ಸಮೀಕ್ಷಾ ವರದಿ ಹೇಳಿದೆ.

ಬೆಂಗಳೂರಿನ ಸಾಮಾಜಿಕ ಪರಿಣಾಮ ಸಲಹೆಗಾರ ಸಂಸ್ಥೆ ‘ಅಸರ್‌’ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಮಾನ ಮನಸ್ಕ ಸಂಸ್ಥೆಗಳ ಒಕ್ಕೂಟವಾಗಿರುವ ಸಸ್ಟೈನೇಬಲ್‌ ಮೊಬಿಲಿಟಿ ನೆಟ್‌ವರ್ಕ್ ಮತ್ತು ನವದೆಹಲಿಯ ಆರ್ಥಿಕ ಸಂಶೋಧನೆ ಮತ್ತು ನೀತಿ ಸಲಹಾ ಥಿಂಕ್-ಟ್ಯಾಂಕ್ ನಿಕೋರ್ ಅಸೋಸಿಯೇಟ್ಸ್ ಅಧ್ಯಯನ ನಡೆಸಿದ್ದವು.

‘ಶಕ್ತಿ’ ಯೋಜನೆಯಿಂದಾಗಿ ಮಹಿಳೆಯರ ಔದ್ಯೋಗಿಕ ದರವು ಬೆಂಗಳೂರಿನಲ್ಲಿ ಶೇ 23 ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇ 21ರಷ್ಟು ಏರಿಕೆಯಾಗಿರುವುದು ಅಧ್ಯಯನದಿಂದ ಗೊತ್ತಾಗಿದೆ. ಶಕ್ತಿ ಯೋಜನೆಯ ಮಾದರಿಯಲ್ಲಿಯೇ ಇತರ ರಾಜ್ಯಗಳು ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ, ಶೇ 50 ರಿಯಾಯಿತಿ ದರದಲ್ಲಿ ಪ್ರಯಾಣ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದರೂ ರಾಜ್ಯದ ಸಾಧನೆ ಉನ್ನತಮಟ್ಟದಲ್ಲಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

ADVERTISEMENT

ಉಚಿತ ಪ್ರಯಾಣ ಯೋಜನೆ ಹೊಂದಿರುವ ದೆಹಲಿ, ಕರ್ನಾಟಕ, ಉಚಿತ ಯೋಜನೆ ಇಲ್ಲದ ಪಶ್ಚಿಮ ಬಂಗಾಳ, ಕೇರಳ, ರಿಯಾಯಿತಿ ನೀಡಿರುವ ಮಹಾರಾಷ್ಟ್ರ ರಾಜ್ಯಗಳ ಹತ್ತು ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. 

‘ಶಕ್ತಿ ಯೋಜನೆ ಜಾರಿಯಾಗುವ ಮೊದಲು ಬೇರೆ ಸಾರಿಗೆ ವ್ಯವಸ್ಥೆಯಲ್ಲಿ ಸಂಚರಿಸುತ್ತಿದ್ದೆವು. ಶೇ 30ರಿಂದ ಶೇ 50ರಷ್ಟು ವೆಚ್ಚ ಉಳಿತಾಯವಾಗಿದೆ’ ಎಂದು ಮಹಿಳೆಯರು ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ.

‘ಶಕ್ತಿ ಯೋಜನೆಯು ಮಹಿಳೆಯರಿಗೆ ಉತ್ತಮ ಉದ್ಯೋಗಾವಕಾಶಗಳು, ಉತ್ತಮ ವೇತನ ಮತ್ತು ಉದ್ಯಮಿಗಳಾಗಿ ರೂಪುಗೊಳ್ಳಲು, ಉತ್ತಮ ಮಾರುಕಟ್ಟೆಯ ಸೌಲಭ್ಯಗಳನ್ನು ಕಂಡುಕೊಳ್ಳಲು ಸಹಾಯ ಮಾಡಿದೆ’ ಎಂದು ಲೋಕನೀತಿಯ ಹಿರಿಯ ಸಲಹೆಗಾರ್ತಿ ತಾರಾ ಕೃಷ್ಣಸ್ವಾಮಿ, ನಿಕೋರ್ ಅಸೋಸಿಯೇಟ್ಸ್ ಸಂಸ್ಥೆಯ ಸಂಸ್ಥಾಪಕಿ ಮಿತಾಲಿ ನಿಕೋರ್ ತಿಳಿಸಿದ್ದಾರೆ.

‘ಬಸ್‌ಗಳಲ್ಲಿ ಮಹಿಳೆಯರನ್ನು ಉಚಿತವಾಗಿ ಕರೆದುಕೊಂಡು ಬರುವುದರ ಜೊತೆಗೆ ಸುರಕ್ಷತೆ ಮತ್ತು ಮೂಲಸೌಕರ್ಯ ನೀಡುವುದು ಅಗತ್ಯ’ ಎಂದು ಸಸ್ಟೈನೇಬಲ್ ಮೊಬಿಲಿಟಿ ನೆಟ್‌ವರ್ಕ್ ಸಂಸ್ಥೆಯ ಯೋಜನಾ ಮುಖ್ಯಸ್ಥೆ ರಿಯಾ ಕರಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.