ADVERTISEMENT

ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ: ಹಮಾಲಿ ಕಾರ್ಮಿಕರ ಪ್ರತಿಭಟನೆ

ಸರ್ಕಾರದಿಂದ ನೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಮೇ 2020, 20:35 IST
Last Updated 30 ಮೇ 2020, 20:35 IST
ಯಶವಂತಪುರ ಎಪಿಎಂಸಿ ಬಳಿ ಹಮಾಲಿ ಕಾರ್ಮಿಕರು ಶನಿವಾರ ಪ್ರತಿಭಟನೆ ನಡೆಸಿದರು
ಯಶವಂತಪುರ ಎಪಿಎಂಸಿ ಬಳಿ ಹಮಾಲಿ ಕಾರ್ಮಿಕರು ಶನಿವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ತಮಗೆ ಸರ್ಕಾರ ಆರ್ಥಿಕ ನೆರವು ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮಾಲಿ ಕಾರ್ಮಿಕರು ರಾಜ್ಯ ಹಮಾಲಿ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಯಶವಂತಪುರ ಎಪಿಎಂಸಿಯಲ್ಲಿ ಶನಿವಾರ ಮುಷ್ಕರ ನಡೆಸಿದರು.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ.ಮಹಾಂತೇಶ್, ‘ಅಂತರ ಕಾಯ್ದುಕೊಳ್ಳುವ ಸಲುವಾಗಿ ಎಪಿಎಂಸಿ ಮಾರುಕಟ್ಟೆಯನ್ನು ವಿವಿಧೆಡೆಗೆ ಸ್ಥಳಾಂತರಿಸಲಾಗಿದೆ. 24 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಹಮಾಲಿಗಳು ದಿನಗೂಲಿ ನಂಬಿ ಜೀವನ ನಡೆಸುವವರು. ಲಾಕ್‍ಡೌನ್ ಜಾರಿಯಾದ ಬಳಿಕ ಒಂದು ತಿಂಗಳಮಟ್ಟಿಗೆ ಎಪಿಎಂಸಿಗಳು ಕಾರ್ಯನಿರ್ವಹಿಸಲಿಲ್ಲ. ನಿರ್ಬಂಧದಿಂದ ಹಮಾಲಿಗಳಿಗೆ ಸಾರಿಗೆಯೂ ಇರಲಿಲ್ಲ. ವಾರದಲ್ಲಿ ಕೆಲವೇ ದಿನಗಳು ಎಪಿಎಂಸಿಗಳು ಕಾರ್ಯನಿರ್ವಹಿಸುತ್ತಿದ್ದು, ಹಮಾಲಿಗಳಿಗೆ ಮೊದಲಿನಂತೆ ಕೂಲಿ ಸಿಗುತ್ತಿಲ್ಲ’ ಎಂದು ಅವರು ವಿವರಿಸಿದರು.

‘ಹಮಾಲಿಗಳನ್ನು ನಿರುದ್ಯೋಗಿಗಳನ್ನಾಗಿ ಮಾಡಲಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಕುರಿತ ಸುಗ್ರೀವಾಜ್ಞೆಯನ್ನು ಸರ್ಕಾರ ವಾಪಸ್ ಪಡೆಯಬೇಕು. ಅನ್ಯ ರಾಜ್ಯಗಳಿಂದ ಮಾರುಕಟ್ಟೆಗಳಿಗೆ ಬರುವವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಎಪಿಎಂಸಿ ಯಾರ್ಡ್ ಮಹಿಳಾ ಕಾರ್ಮಿಕರ ಸಂಘ, ಎಪಿಎಂಸಿ ಮಂಡಿ ಹಮಾಲಿ ಕಾರ್ಮಿಕರ ಸಂಘ, ಲೋಡಿಂಗ್-ಅನ್ ಲೋಡಿಂಗ್, ಜನರಲ್ ವರ್ಕರ್ಸ್ ಯೂನಿಯನ್, ರೆಗ್ಯೂಲೇಟೆಡ್ ವರ್ಕರ್ಸ್ ಯೂನಿಯನ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.