ADVERTISEMENT

ಹಾನಗಲ್‌ ಉಪಚುನಾವಣೆ| ಮಾನೆ– ತಹಶೀಲ್ದಾರ್ ಪಟ್ಟು: ‘ಕೈ’ ನಾಯಕರಿಗೆ ಇಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 18:59 IST
Last Updated 30 ಸೆಪ್ಟೆಂಬರ್ 2021, 18:59 IST
   

ಬೆಂಗಳೂರು: ಉಪ ಚುನಾವಣೆ ನಡೆಯಲಿರುವ ಹಾನಗಲ್‌ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ, ಈ ಕ್ಷೇತ್ರದಿಂದ ನಾಲ್ಕು ಬಾರಿ ಚುನಾಯಿತರಾಗಿರುವ ಮನೋಹರ ತಹಶೀಲ್ದಾರ್‌ ಮತ್ತು ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಹಾಲಿ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಪಟ್ಟು ಹಿಡಿದಿರುವುದು ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇಬ್ಬರ ಮಧ್ಯೆ ಸಂಧಾನ ಸಭೆ ನಡೆಸಿ, ಒಬ್ಬ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲು ಸಿದ್ದರಾಮಯ್ಯ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಇತರ ನಾಯಕರು ಗುರುವಾರ ರಾತ್ರಿಯವರೆಗೆ ಸಮಾಲೋಚನೆ ನಡೆಸಿದರು. ಆದರೆ, ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನ ಆಗಿಲ್ಲ. ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ನಾಯಕರು ಸಲಹೆ ನೀಡಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಮನೋಹರ ತಹಶೀಲ್ದಾರ್‌, ‘ನಾಯಕರ ಸಲಹೆಯನ್ನು ಒಪ್ಪಿಕೊಂಡಿದ್ದೇವೆ. ಟಿಕೆಟ್‌ ಕೇಳುವುದು ಹಕ್ಕು. ಆ ಹಕ್ಕನ್ನು ನಾಯಕರ ಮುಂದೆ ಪ್ರತಿಪಾದಿಸಿದ್ದೇನೆ. ನನಗೇ ಕೊಡಬೇಕು, ಹಿರಿಯವನಿದ್ದೇನೆ. ನಾಲ್ಕು ಬಾರಿ ಶಾಸಕನಾಗಿದ್ದೆ. 45 ವರ್ಷ ಪಕ್ಷ ಕಟ್ಟಿದ್ದೇನೆ. ಒಂದು ನಿಮಿಷ ಕೂಡಾ ಮನಸ್ಸು ಬದಲಿಸದೆ ಪಕ್ಷದಲ್ಲಿದ್ದೇನೆ. ಯಾವುದೇ ಪರಿಸ್ಥಿತಿಯಲ್ಲಿ ನನಗೇ ಟಿಕೆಟ್‌ ಕೊಡಲೇಬೇಕು ಎಂದು ಪ್ರತಿಪಾದಿಸಿದ್ದೇನೆ. ಅದಕ್ಕೆ ನಾಯಕರು ಸ್ಪಂದಿಸಿದ್ದಾರೆ’
ಎಂದರು.

ADVERTISEMENT

‘ಇಬ್ಬರಿದ್ದೀರಿ, ಒಬ್ಬರಿಗೆ ಟಿಕೆಟ್ ಕೊಡಲು ಸಾಧ್ಯ ಎಂದಿದ್ದಾರೆ. ನನಗೇ ಕೊಡಬೇಕು ಎಂದು ಕೊನೆಯದಾಗಿಯೂ ಮನವಿ ಮಾಡಿದ್ದೇನೆ. ಒಬ್ಬರಿಗೆ ಟಿಕೆಟ್‌ ಕೊಡುತ್ತೇವೆ. ಮತ್ತೊಬ್ಬರಿಗೆ ಬೇರೆ ರೀತಿ ಗೌರವ ಕೊಡುತ್ತೇವೆ ಎಂದಿದ್ದಾರೆ’ ಎಂದೂ ಹೇಳಿದರು.

‘ಪಕ್ಷ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಯಾರೂ ಮಾತನಾಡಬಾರದು., ಹೈಕಮಾಂಡ್ ಜೊತೆ ಸಮಾಲೋಚನೆ ಮಾಡಿ, ಬೇರೆ ಬೇರೆ ಮೂಲಗಳಿಂದ ಮಾಹಿತಿ ಪಡೆದು ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ’ ಎಂದರು.

ಶ್ರೀನಿವಾಸ ಮಾನೆ ಮಾತನಾಡಿ, ‘ನಮ್ಮ ಅಭಿಪ್ರಾಯವನ್ನು ರಾಜ್ಯದ ನಾಯಕರಿಗೆ ತಿಳಿಸಿದ್ದೇವೆ. ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ, ರಾಜ್ಯದ ಹಿತದೃಷ್ಟಿಯಿಂದ ನಮ್ಮ ಭಿನ್ನಾಭಿಪ್ರಾಯ ಬದಿಗಿಟ್ಟು, ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ಒಮ್ಮತದಿಂದ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ’ ಎಂದರು.

'ಮನೋಹರ ತಹಶೀಲ್ದಾರ್, ಶ್ರೀನಿವಾಸ ಮಾನೆ, ಪ್ರಕಾಶ್ ಪಾಟೀಲ ಅವರಲ್ಲಿ ಯಾರೇ ಆಗಿರಲಿ ಪಕ್ಷ ಬಹಳ ಮುಖ್ಯ ಎಂದು ಅರಿತಿದ್ದಾರೆ. ನಾವು ಯಾರಿಗೇ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಾರೆ. ಇಡೀ ಜಿಲ್ಲೆಯ ನಾಯಕರು ಶಾಸಕಾಂಗ ಪಕ್ಷದ ನಾಯಕರ ಸಮ್ಮುಖದಲ್ಲಿ ಚರ್ಚೆ ಮಾಡಿದ್ದಾರೆ. ರಾಜಕೀಯವಾಗಿ ಎಲ್ಲರಿಗೂ ಸ್ಥಾನಮಾನ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಅದನ್ನು ನಾವು ಮಾಡುತ್ತೇವೆ. ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಕೆಲಸ ಮಾಡುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.