
ಬೆಂಗಳೂರು: ಮಹಿಳಾ ಫಿಟ್ನೆಸ್ ತರಬೇತುದಾರರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ದಕ್ಷಿಣ ವಿಭಾಗದ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣದ ಸುಧೀರ್ ಕುಮಾರ್ ಬಂಧಿತ.
ಆರೋಪಿ ಅಶ್ಲೀಲ ಸಂದೇಶ ಕಳುಹಿಸಿದ್ದ ಸ್ಕ್ರೀನ್‌ಶಾಟ್ ಸಹಿತ 34 ವರ್ಷದ ಫಿಟ್ನೆಸ್ ತರಬೇತುದಾರರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಹರಿಯಾಣದ ಯುವತಿ, ಕಳೆದ 15 ವರ್ಷಗಳಿಂದ ನಗರದಲ್ಲಿ ಫಿಟ್ನೆಸ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಹರಿಯಾಣದಲ್ಲಿ ಕುಟುಂಬಸ್ಥರ ಮನೆಗೆ ಯುವತಿ ಹೋಗಿದ್ದರು. ಅದೇ ಮನೆಗೆ ಆರೋಪಿಯೂ ಬಂದಿದ್ದ. ಆಗ ದೂರುದಾರರನ್ನು ಆರೋಪಿ ನೋಡಿದ್ದ. ನಂತರ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಅವರನ್ನು ಪರಿಚಯಿಸಿಕೊಂಡು ಕಿರುಕುಳ ನೀಡಲಾರಂಭಿಸಿದ್ದ. ಅಶ್ಲೀಲ ಸಂದೇಶ ಹಾಗೂ ಫೋಟೊಗಳನ್ನು ಕಳುಹಿಸುತ್ತಿದ್ದ. ಆರೋಪಿಯ ಕೃತ್ಯದಿಂದ ಬೇಸತ್ತಿದ್ದ ಯುವತಿ, ಆತನ ಖಾತೆಯನ್ನು ಬ್ಲಾಕ್ ಲೀಸ್ಟ್‌ಗೆ ಸೇರಿಸಿದ್ದರು. ಆದರೂ ಆತ ಬೇರೆ ಬೇರೆ ಖಾತೆಗಳ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಎಂಬುದು ಗೊತ್ತಾಗಿದೆ.
ಜ.12ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ, ಬನಶಂಕರಿ ಮೂರನೇ ಹಂತದಲ್ಲಿರುವ ಜಿಮ್ ಬಳಿ ತೆರಳಿ ಯುವತಿಯ ಕುರಿತು ಆಕೆಯ ಸ್ನೇಹಿತರ ಬಳಿ ವಿಚಾರಿಸಿದ್ದ. ಆರೋಪಿ ಬೆಂಗಳೂರಿಗೆ ಬಂದು ಹುಡುಕಾಟ ನಡೆಸುತ್ತಿರುವ ಮಾಹಿತಿ ತಿಳಿದು ಆತಂಕಗೊಂಡಿದ್ದ ಯುವತಿ ದೂರು ನೀಡಿದ್ದರು. ಆ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಮೊಬೈಲ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್) ರವಾನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.