ADVERTISEMENT

ಹವಾಲಾ ದಂಧೆ; 185 ಖಾತೆಗಳು, ₹ 31.50 ಕೋಟಿ ಅಕ್ರಮ ವರ್ಗಾವಣೆ

* ಜಾಲ ಭೇದಿಸಿದ ಪುಟ್ಟೇನಹಳ್ಳಿ ಪೊಲೀಸರು * ನಾಲ್ವರ ಬಂಧನ, ಪ್ರಮುಖ ಆರೋಪಿಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 19:45 IST
Last Updated 3 ಡಿಸೆಂಬರ್ 2021, 19:45 IST
   

ಬೆಂಗಳೂರು: ರಾಜ್ಯದಲ್ಲಿ ಸಕ್ರಿಯವಾಗಿದ್ದ ಹವಾಲಾ ದಂಧೆ ಜಾಲವನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಜಾಲ, ಇದುವರೆಗೂ ₹ 31.50 ಕೋಟಿ ಮೊತ್ತವನ್ನು ಅಕ್ರಮ ವರ್ಗಾವಣೆ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.

‘ಕೇರಳದ ಮೊಹಮ್ಮದ್ ಸಾಹಿಲ್, ಫೈಸಲ್, ಫಜಲ್ ಹಾಗೂ ಅಬ್ದುಲ್ ಮನಾಸ್ ಬಂಧಿತರು. ತಮ್ಮದೇ ಜಾಲ ರೂಪಿಸಿಕೊಂಡಿದ್ದ ಆರೋಪಿಗಳು, ಹಣದ ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದರು. ಜಾಲದ ಪ್ರಮುಖ ರೂವಾರಿ ತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರಿದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ರಾಜ್ಯದ 25 ಬ್ಯಾಂಕ್‌ಗಳ 2,656 ಗ್ರಾಹಕರ ಖಾತೆಗಳನ್ನು ಆರೋಪಿಗಳು ಅಕ್ರಮಕ್ಕೆ ಬಳಸಿಕೊಂಡಿ ದ್ದರು. ಈ ಪೈಕಿ 185 ಖಾತೆಗಳ ವಹಿವಾಟಿನ ವಿವರ ಮಾತ್ರ ಲಭ್ಯವಾಗಿದ್ದು, ₹ 31.50 ಕೋಟಿ ಹಣ ವರ್ಗಾವಣೆ ಆಗಿರುವುದು ಗೊತ್ತಾಗಿದೆ. ಉಳಿದ ಖಾತೆಗಳ ವಿವರ ಸಂಗ್ರಹಕ್ಕಾಗಿ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಆರೋಪಿಗಳ ವಾಸಸ್ಥಳ, ಕಚೇರಿ ಗಳ ಮೇಲೂ ದಾಳಿ ಮಾಡಲಾಗಿದೆ. ₹ 20.15 ಲಕ್ಷ ನಗದು, ನೋಟು ಎಣಿಸುವ ಯಂತ್ರ ಪತ್ತೆ ಆಗಿದೆ. ಹಣ ವರ್ಗಾವಣೆ ಮಾಡಿದ್ದ ಬಗ್ಗೆ ದಾಖಲೆಗಳು ಸಿಕ್ಕಿವೆ. ಎಲ್ಲವನ್ನೂ ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ಹೇಳಿದರು.

‘ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದ ಕೆಲ ಉದ್ಯಮಿಗಳು, ಕಪ್ಪು ಹಣವನ್ನು ಆರೋಪಿಗಳಿಗೆ ಕೊಡುತ್ತಿದ್ದರು. ಅದೇ ಹಣವನ್ನು ಆರೋಪಿಗಳು ಅಕ್ರಮವಾಗಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದರು. ಪ್ರತಿಯೊಬ್ಬ ಆರೋಪಿಯು ತಲಾ ₹ 60,000 ಕಮಿಷನ್ ಪಡೆಯುತ್ತಿದ್ದರು’ ಎಂದೂ ಪೊಲೀಸ್ ಅಧಿಕಾರಿ ವಿವರಿಸಿದರು.

ಮಚ್ಚು ಸಮೇತ ಸಿಕ್ಕಿಬಿದ್ದಿದ್ದ: ‘ಜೆ.ಪಿ. ನಗರದ 6ನೇ ಹಂತದ ಜರಗನ ಹಳ್ಳಿಯ 16ನೇ ಅಡ್ಡರಸ್ತೆ ಯಲ್ಲಿ ಆರೋಪಿ ಮೊಹಮ್ಮದ್ ಸಾಹಿಲ್ ಅನುಮಾ ನಾಸ್ಪದವಾಗಿ ಸುತ್ತಾಡು ತ್ತಿದ್ದ. ಆತನನ್ನು ಗಮನಿಸಿದ್ದ ಸ್ಥಳೀಯ ರೊಬ್ಬರು, ಏನು ಮಾಡುತ್ತಿದ್ದಿಯಾ ಎಂದು ಪ್ರಶ್ನಿಸಿದ್ದರು. ಅವರ ಕೈಗೆ ಆರೋಪಿ ಹಣದ ಕಂತೆಗಳನ್ನು ನೀಡಲು ಮುಂದಾಗಿದ್ದ’ ಎಂದು ಮೂಲ ಗಳು ಹೇಳಿವೆ.

‘ಆರೋಪಿ ಬಗ್ಗೆ ಅನುಮಾನಗೊಂಡ ಸ್ಥಳೀಯರು, ಆತನನ್ನು ಹಿಡಿಯಲು ಮುಂದಾಗಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆತ, ಬ್ಯಾಗ್‌ನಿಂದ ಮಚ್ಚು ಹೊರಗೆ ತೆಗೆದು ಕೊಲೆ ಬೆದರಿಕೆಯೊಡ್ಡಿದ್ದ. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋದ ಹೊಯ್ಸಳ ಸಿಬ್ಬಂದಿ, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದ್ದರು. ಆತನೇ ಹಣ ಅಕ್ರಮ ವರ್ಗಾವಣೆ ಬಗ್ಗೆ ಬಾಯ್ಬಿಟ್ಟಿದ್ದ. ಆತನ ಬಳಿ ₹ 1 ಲಕ್ಷ ನಗದು ಪತ್ತೆಯಾಗಿತ್ತು. ಅದಕ್ಕೆ ದಾಖಲೆ ಇರಲಿಲ್ಲ’ ಎಂದೂ ತಿಳಿಸಿವೆ.

‘ಖಾತೆದಾರರಿಗೆ ಮಾಹಿತಿಯಿಲ್ಲ’

‘ರಾಜ್ಯದ ಹಲವು ಗ್ರಾಹಕರ ಬ್ಯಾಂಕ್ ಖಾತೆಗಳ ವಿವರ ಆರೋಪಿಗಳ ಬಳಿ ಸಿಕ್ಕಿದೆ. ಅಂಥ ಖಾತೆದಾರರನ್ನೂ ವಿಚಾರಣೆ ನಡೆಸಲಾಯಿತು. ಹಣ ವರ್ಗಾವಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಬಹುತೇಕರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜಾಲದ ಪ್ರಮುಖ ರೂವಾರಿ ಹೇಳಿದ ಖಾತೆಗಳಿಗೆ ಆರೋಪಿಗಳು ಹಣ ಜಮೆ ಮಾಡುತ್ತಿದ್ದರು. ಸದ್ಯ ಎಲ್ಲ ಖಾತೆಗಳನ್ನು ಜಪ್ತಿ ಮಾಡಿಸಲಾಗಿದೆ. ಪ್ರಕರಣದ ಬಗ್ಗೆ ಕೇಂದ್ರ ತನಿಖಾ ತಂಡಗಳಿಗೂ ಮಾಹಿತಿ ನೀಡಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.