
ಬಯಲು ರಂಗಮಂದಿರದ ನೀಲನಕ್ಷೆ
ಬೆಂಗಳೂರು: ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಚ್‌ಬಿಆರ್ ಲೇಔಟ್‌ನಲ್ಲಿ ‘ಥೀಮ್ ಪಾರ್ಕ್’ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ತಿಂಗಳ ಅಂತ್ಯದ ವೇಳೆಗೆ ಲೋಕಾರ್ಪಣೆಯಾಗಲಿದೆ.
ವಿದ್ಯುತ್ ಪ್ರಸರಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (ಕೆಪಿಟಿಸಿಎಲ್) ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿ ಕೊಂಡಿದೆ. ಅದರ ಭಾಗವಾಗಿ ‘ಥೀಮ್ ಪಾರ್ಕ್’ ನಿರ್ಮಿಸುವ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಿದೆ.
ಕೆಪಿಟಿಸಿಎಲ್‌ಗೆ ಸೇರಿದ ಈ ಜಾಗದಲ್ಲಿ ಹಲವು ವರ್ಷಗಳಿಂದ ತ್ಯಾಜ್ಯ, ಅನುಪಯುಕ್ತ ವಸ್ತುಗಳನ್ನು ಹಾಕಲಾಗುತ್ತಿತ್ತು. ಹಾವು, ಚೇಳು ಇತ್ಯಾದಿ ಸರೀಸೃಪಗಳ ಆವಾಸ ಸ್ಥಾನವಾಗಿತ್ತು. ಅಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ಕಾರಣ, ಈ ಭಾಗದ ಜನರು ಮುಕ್ತವಾಗಿ ಓಡಾಡಲು ಭಯಪಡುವಂಥ ವಾತಾವರಣ ಇತ್ತು. ನಿರಂತರ ಪ್ರಯತ್ನದಿಂದಾಗಿ ಇದಕ್ಕೆಲ್ಲ ಕಡಿವಾಣ ಬಿದ್ದಿದ್ದು, ಈಗ ಸುಂದರವಾದ ಉದ್ಯಾನ ಮೈದಳೆಯುತ್ತಿದೆ.
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಕ್ಷೇತ್ರದಲ್ಲೇ ‘ಥೀಮ್ ಪಾರ್ಕ್’ ನಿರ್ಮಾಣವಾಗುತ್ತಿದೆ. ಸಿವಿಲ್ ಕಾಮಗಾರಿಗಳು ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ಮುಂದಿನ ತಿಂಗಳು ಉದ್ಯಾನದ ಸುತ್ತಲಿನ ಸುಮಾರು 1,500 ಚದರಡಿ ಜಾಗದಲ್ಲಿ ಸಸಿಗಳನ್ನು ನೆಡಲಾಗುತ್ತದೆ.
₹4.39 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡುತ್ತಿದ್ದು, ಮಕ್ಕಳಿಗೆ ಇಷ್ಟವಾಗುವ ಉಯ್ಯಾಲೆ, ಜಾರುಬಂಡಿ ಸೇರಿದಂತೆ ವಿವಿಧ ಆಟಗಳಿಗೆ ಸಂಬಂಧಿಸಿದ ಉಪಕರಣಗಳು, ಜಿಮ್‌ಗೆ ಅಗತ್ಯವಿರುವ ಉಪಕರಣಗಳನ್ನು ಈಗಾಗಲೇ ಅಳವಡಿಸಲಾಗಿದೆ.
ಆ್ಯಂಪಿ ಥಿಯೇಟರ್‌ನಲ್ಲಿ 100ಕ್ಕೂ ಅಧಿಕ ಜನರಿಗೆ ಕುಳಿತುಕೊಳ್ಳಲು ಅವ ಕಾಶ ಇರಲಿದೆ. ಎಚ್‌ಬಿಆರ್ ಲೇಔಟ್‌ನ ನಾಗರಿಕರು ಸಣ್ಣಪುಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು, ಹುಟ್ಟು ಹಬ್ಬ ಆಚರಿಸಿಕೊಳ್ಳಲು ಅನುಕೂಲವಾಗುವಂತೆ ತ್ರಿಡಿ ದೀಪಾಲಂಕಾರದ ವ್ಯವಸ್ಥೆ ಮಾಡಲಾಗುತ್ತದೆ.
ಎಚ್‌ಬಿಆರ್ ಲೇಔಟ್‌ನ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸುತ್ತಿರುವ ಈ ಪಾರ್ಕ್‌ನಲ್ಲಿ ತ್ರಿಭುಜಾಕಾರದ ಸುಮಾರು 700 ಮೀಟರ್ ನಡಿಗೆ ಪಥ ಇದೆ. ಮಕ್ಕಳಿಗೆ ಆಟದ ಮೈದಾನ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಜಿಮ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹಸಿರು ಕುರಿತ ಕಾಳಜಿಯೊಂದಿಗೆ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ ಮನರಂಜನೆಗೆ ಅಷ್ಟೇ ಅಲ್ಲದೆ ನೈಸರ್ಗಿಕ ಸಂರಕ್ಷಣೆ, ಆರೋಗ್ಯಕರ ಜೀವನಶೈಲಿ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ವೇದಿಕೆಯಾಗಲಿದೆ. ಪಾರ್ಕ್‌ನ ಸುತ್ತ ಗಿಡಗಳನ್ನು ನೆಟ್ಟು ಹಸಿರೀಕರಣಗೊಳಿಸಲಾಗುವುದು. ಉದ್ಯಾನಕ್ಕೆ ಬರುವ ನಾಗರಿಕರು ಆಹ್ಲಾದಕರವಾದ ವಾತಾವರಣದಲ್ಲಿ ವಿಹರಿಸಬಹುದು ಎಂದು ಕೆಪಿಟಿಸಿಎಲ್‌ನ ಅಧಿಕಾರಿಗಳು, ಗುತ್ತಿಗೆದಾರರು ತಿಳಿಸಿದರು.
ಉದ್ಯಾನದಲ್ಲಿ ವಾಯುವಿಹಾರ ಮಾಡಿದ ಬಳಿಕ ವಿಶ್ರಾಂತಿ ಪಡೆಯಲು ಪ್ಯಾರಾಗೋಲಾ ನಿರ್ಮಿಸಲಾಗುತ್ತಿದೆ. ಅಲ್ಲದೆ ಕುಳಿತುಕೊಳ್ಳಲು ಕಲ್ಲಿನ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ ಪಾರ್ಕ್‌ನಲ್ಲಿ ಶೌಚಾಲಯ ವ್ಯವಸ್ಥೆ, ನಂದಿನಿ ಮಿಲ್ಕ್ ಬೂತ್ ಮತ್ತು ಹಾಪ್‌ಕಾಮ್ಸ್ ಮಳಿಗೆ ಕೂಡ ಇರಲಿದೆ. ಉದ್ಯಾನಕ್ಕೆ ಬರುವ ನಾಗರಿಕರಿಗೆ ಹಾಲು, ತರಕಾರಿ ಇತ್ಯಾದಿ ವಸ್ತುಗಳು ಇಲ್ಲೇ ಲಭ್ಯವಾಗಲಿವೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1990ರ ದಶಕದಲ್ಲಿ ಎಚ್‌ಬಿಆರ್ ಬಡಾವಣೆಯನ್ನು ನಿರ್ಮಿಸಿದೆ. ಆದರೆ, ಇಲ್ಲಿನ ಜನರಿಗೆ ಸೂಕ್ತವಾದ ಉದ್ಯಾನ ಇರಲಿಲ್ಲ. ಆ ಕೊರತೆಯನ್ನು ಇದು ನೀಗಿಸಲಿದೆ. ಇನ್ನು ಮುಂದೆ ಈ ಭಾಗದ ಜನರಿಗೆ ಮನರಂಜನೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ಈ ಉದ್ಯಾನವು ಕೇಂದ್ರ ಬಿಂದುವಾಗಲಿದೆ.
ಇಲ್ಲಿ ನೆಡುವ ಸಸಿಗಳಿಗೆ ನೀರಿನ ಅಗತ್ಯವಿರುವುದನ್ನು ಮನಗಂಡು ಈಗಾಗಲೇ ಕೊಳವೆಬಾವಿ ಕೊರೆದಿದ್ದು, ಹೇರಳವಾಗಿ ನೀರು ಲಭ್ಯವಾಗಿದೆ. ನೀರಿನ ಸಂಗ್ರಹಕ್ಕೆ ಸಂಪ್ ನಿರ್ಮಿಸಲಾಗಿದೆ. ಉದ್ಯಾನದ ನಿರ್ವಹಣೆಗೆ ತೋಟಗಾರಿಕೆ ಸಿಬ್ಬಂದಿ ಇರಲಿದ್ದು, ಅವರಿಗೆ ಹಾಗೂ ಭದ್ರತಾ ಸಿಬ್ಬಂದಿಗೆ ಪ್ರತ್ಯೇಕವಾಗಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.
ಹಸಿರು ಪರಿಕಲ್ಪನೆಯಡಿ ಥೀಮ್ ಪಾರ್ಕ್ ಆರಂಭಿಸುತ್ತಿದ್ದು ಜನರಿಗೆ ಅನುಕೂಲದ ಜತೆಗೆ ಸಮಾಜಕ್ಕೆ ಹಸಿರಿನ ಮಹತ್ವ ತಿಳಿಸುವುದೂ ನಮ್ಮ ಉದ್ದೇಶ– ಕೆ.ಜೆ.ಜಾರ್ಜ್, ಇಂಧನ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.