ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಪ್ರಜಾವಾಣಿ
ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ನಗರದಲ್ಲಿ ಇಎಸ್‌ಐ ಆಸ್ಪತ್ರೆಯ 50ಕ್ಕೂ ಅಧಿಕ ಡಿಸ್ಪೆನ್ಸರಿಗಳು ವೈದ್ಯರು, ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ಸೌಲಭ್ಯಗಳ ಕೊರತೆಗಳಿಂದ ಬಳಲುತ್ತಿವೆ. ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅವುಗಳಿಗೆ ‘ಚಿಕಿತ್ಸೆ’ ನೀಡಬೇಕಿದೆ.
‘ಬಹುತೇಕ ಡಿಸ್ಪೆನ್ಸರಿಗಳಲ್ಲಿ ಒಬ್ಬರೇ ವೈದ್ಯರಿದ್ದಾರೆ. ಶುಶ್ರೂಷಕರ ಸಂಖ್ಯೆಯೂ ಕಡಿಮೆ. ಡಿಸ್ಪೆನ್ಸರಿಗಳು ಬೆಳಿಗ್ಗೆ 9ಕ್ಕೆ ತೆರೆದು, ಸಂಜೆ 5.30 ಅಥವಾ 7 ಗಂಟೆಗೆ ಹೊತ್ತಿಗೆ ಬಂದ್ ಆಗುತ್ತವೆ. ಆ ವೇಳೆಗೆ ಕಾರ್ಮಿಕರು ಕೆಲಸಕ್ಕೆ ತೆರಳಿರುತ್ತಾರೆ. ಕೆಲಸದ ದಿನಗಳಲ್ಲಿ ಆಸ್ಪತ್ರೆಗೆ ತೆರಳುವುದು ಕಷ್ಟವಾಗುತ್ತಿದೆ. ಭಾನುವಾರ ತೆರೆಳಿದರೆ ಬಾಗಿಲು ತೆರೆಯುವುದೇ ಕಡಿಮೆ’ ಎಂದು ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಅಧ್ಯಕ್ಷೆ ರುಕ್ಮಿಣಿ ಸಮಸ್ಯೆ ಬಿಡಿಸಿಟ್ಟರು.
‘ಶೀತ, ಕೆಮ್ಮು, ಜ್ವರ ಮುಂತಾದ ಸಣ್ಣಪುಟ್ಟ ಅನಾರೋಗ್ಯಗಳಿಗೆ ಇಎಸ್‌ಐ ಆಸ್ಪತ್ರೆಗಳಿಗೆ ಬರುವಂತಿಲ್ಲ. ಡಿಸ್ಪೆನ್ಸರಿಗಳಿಗೇ ಹೋಗಬೇಕು. ಅಲ್ಲಿ ಪರೀಕ್ಷೆ, ಆಸ್ಪತ್ರೆಗೆ ಶಿಫಾರಸು ಮಾಡಿದರಷ್ಟೆ ದೊಡ್ಡ ಆಸ್ಪತ್ರೆಗಳಿಗೆ ಹೋಗಬಹುದು. ಡಿಸ್ಪೆನ್ಸರಿಗಳಲ್ಲಿ ಕಾರ್ಡ್ ಹಿಡಿದು ಸರದಿಯಲ್ಲಿ ನಿಂತು ಕಾರ್ಮಿಕರು ಕಾಯುತ್ತಿರುತ್ತಾರೆ’ ಎಂದು ದೂರಿದರು.
ಮಾದರಿ ಆಸ್ಪತ್ರೆಗೂ ಬೇಕಿದೆ ಹಾಸಿಗೆ: ರಾಜಾಜಿನಗರದ ಮಾದರಿ ಇಎಸ್ಐ ಆಸ್ಪತ್ರೆಗೆ 750 ಬೆಡ್‌ಗಳು ಮಂಜೂರಾಗಿವೆ. ಆದರೆ, ಅಲ್ಲಿರುವುದು 580 ಬೆಡ್‌ಗಳು ಮಾತ್ರ. ಇನ್ನೂ 170 ಬೆಡ್ ಅಳವಡಿಸಲು ಅನುಮತಿ ಇದ್ದರೂ ಜಾಗವೇ ಇಲ್ಲ. ಅದಕ್ಕಾಗಿ ಹೊಸ ಕಟ್ಟಡ ನಿರ್ಮಾಣಗೊಳ್ಳಬೇಕಿದೆ.
‘ಕ್ಯಾನ್ಸರ್, ನವಜಾತ ಶಿಶುಗಳಿಗೆ ಬರುವ ಸೂಕ್ಷ್ಮ ಕಾಯಿಲೆಗಳಿಂದ ಹಿಡಿದು ಎಲ್ಲ ತರಹದ ಚಿಕಿತ್ಸೆಗಳು ಕಾರ್ಮಿಕರಿಗೆ, ಅವರ ಅವಲಂಬಿತರಿಗೆ ಉಚಿತವಾಗಿ ನೀಡಲಾಗುತ್ತಿದೆ. ₹ 1 ಕೋಟಿ ವೆಚ್ಚವಾಗುವ ಚಿಕಿತ್ಸೆಗಳೂ ನೀಡುತ್ತೇವೆ. 66 ಐಸಿಯು ಬೆಡ್‌ಗಳಿದ್ದರೂ ರೋಗಿಗಳ ಸಂಖ್ಯೆ ಹೆಚ್ಚಿದಾಗ ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಬೇಕಾಗುತ್ತದೆ’ ಎಂದು ಮಾದರಿ ಇಎಸ್‌ಐ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಧ್ಯಾ ತಿಳಿಸಿದರು.
ಪ್ರತಿ ಪರೀಕ್ಷೆಗೆ ಕಾಯಬೇಕು: ‘ರಾಜಾಜಿನಗರ ಮಾದರಿ ಆಸ್ಪತ್ರೆ, ಪೀಣ್ಯ ಮಾದರಿ ಆಸ್ಪತ್ರೆಗಳು ಬಹಳ ಚೆನ್ನಾಗಿವೆ. ಸರ್ಕಾರಿ ಆಸ್ಪತ್ರೆಗಳಿಗಿಂತಲೂ ಉತ್ತಮವಾಗಿವೆ. ಇಲ್ಲಿ ಪ್ರತಿ ಪರೀಕ್ಷೆಗೂ ಪ್ರತ್ಯೇಕವಾಗಿ ಸಾಲಿನಲ್ಲಿ ನಿಂತು ಚೀಟಿ ಬರೆಸಬೇಕಿದೆ’ ಎಂದು ಆಸ್ಪತ್ರೆಯಲ್ಲಿದ್ದ ರೋಗಿಯ ಸಂಬಂಧಿ ಸುಬ್ರಹ್ಮಣ್ಯನಗರದ ವೆಂಕಟೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.