ಹೃದಯಾಘಾತ
ಬೆಂಗಳೂರು: ಹಾಸನದಲ್ಲಿ ಹೃದಯಾಘಾತ ಮರಣ ಪ್ರಕರಣಗಳು ದಿಢೀರ್ ಏರಿಕೆಯಾಗಿಲ್ಲ ಎನ್ನುವುದನ್ನು ಖಚಿತಪಡಿಸಿರುವ ತಜ್ಞರ ಸಮಿತಿ, ಈ ಪ್ರಕರಣಗಳ ಅಧ್ಯಯನದ ಆಧಾರದಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯ ಎದುರಿಸುತ್ತಿರುವ ಸಾರ್ವಜನಿಕ ಸಾರಿಗೆ ಚಾಲಕರಿಗೆ ಹೃದಯ ತಪಾಸಣೆ ನಡೆಸಲು ಶಿಫಾರಸು ಮಾಡಿದೆ.
ಹಾಸನದಲ್ಲಿ ಮೇ ಮತ್ತು ಜೂನ್ ತಿಂಗಳಲ್ಲಿ ವರದಿಯಾದ ಹೃದಯಾಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅವರ ಅಧ್ಯಕ್ಷತೆಯ ತಜ್ಞರ ಸಮಿತಿ, ಗುರುವಾರ ಇಲ್ಲಿ ವರದಿ ಬಿಡುಗಡೆ ಮಾಡಿತು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಹಾಸನ ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಹೃದಯಾಘಾತ ಮರಣ ಪ್ರಕರಣಗಳು ದಿಢೀರ್ ಏರಿಕೆಯಾಗಿಲ್ಲ. ಹಾಸನದಲ್ಲಿ 2024ರ ಮೇ ಮತ್ತು ಜೂನ್ ತಿಂಗಳಲ್ಲಿ 19 ಹೃದಯಾಘಾತ ಮರಣ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಎರಡು ತಿಂಗಳಲ್ಲಿ 20 ಮರಣ ಪ್ರಕರಣಗಳು ವರದಿಯಾಗಿವೆ. ತಜ್ಞರ ಸಮಿತಿಯು ಅಲ್ಲಿ ಇತ್ತೀಚೆಗೆ ವರದಿಯಾದ 24 ಪ್ರಕರಣಗಳನ್ನು ಅಧ್ಯಯನ ಮಾಡಿದ್ದು, ನಾಲ್ಕು ಮರಣ ಪ್ರಕರಣಗಳು ಹೃದಯಾಘಾತವಲ್ಲ ಎನ್ನುವುದು ದೃಢಪಟ್ಟಿದೆ. ರಸ್ತೆ ಅಪಘಾತ, ಮೂತ್ರಪಿಂಡ ಕಾಯಿಲೆ, ಗ್ಯಾಸ್ಟ್ರೋಎಂಟರೈಟಿಸ್ ಮತ್ತು ವಿದ್ಯುತ್ ಆಘಾತದಿಂದ ನಾಲ್ವರು ಮೃತಪಟ್ಟಿದ್ದಾರೆ. 10 ಮರಣ ಪ್ರಕರಣಗಳಿಗೆ ಮಾತ್ರ ಹೃದಯಾಘಾತ ಕಾರಣ’ ಎಂದು ಹೇಳಿದರು.
‘ಹೃದಯಾಘಾತದಿಂದ ವರದಿಯಾದ 10 ಮರಣ ಪ್ರಕರಣಗಳಲ್ಲಿ ಮೂವರಿಗೆ ಹೃದಯ ಸಂಬಂಧಿ ಕಾಯಿಲೆಯಿತ್ತು. ಉಳಿದ ಏಳು ಪ್ರಕರಣಗಳಲ್ಲಿ ಶವ ಪರೀಕ್ಷೆ ಹಾಗೂ ಇಸಿಜಿ ಪರೀಕ್ಷೆಯಿಂದ ಮರಣಕ್ಕೆ ಹೃದಯಾಘಾತವೇ ಕಾರಣ ಎನ್ನುವುದು ಖಚಿತಪಟ್ಟಿದೆ. ಉಳಿದ ಹತ್ತು ಪ್ರಕರಣಗಳು ಸಂಭವನೀಯ ಹೃದಯಾಘಾತ ಮರಣ ಪ್ರಕರಣಗಳಾಗಿವೆ. ಈ ಪ್ರಕರಣಗಳಲ್ಲಿ ಮೃತರು ಅಧಿಕ ರಕ್ತದೊತ್ತಡ, ಮಧುಮೇಹ, ಅತೀವ ಬೊಜ್ಜಿನಂತಹ ಸಮಸ್ಯೆ ಎದುರಿಸುತ್ತಿದ್ದರು’ ಎಂದು ವಿವರಿಸಿದರು.
ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ:
‘20 ಮರಣ ಪ್ರಕರಣಗಳಲ್ಲಿ ಶೇ 75 ರಷ್ಟು ನಿಖರ ಕಾರಣಗಳನ್ನು ಗುರುತಿಸಲಾಗಿದೆ. ಕೆಲ ಪ್ರಕರಣಗಳಲ್ಲಿ ಶವ ಪರೀಕ್ಷೆಗೆ ಕುಟುಂಬಸ್ಥರು ಸಹಕರಿಸದ ಕಾರಣ ಉಳಿದ ಶೇ 25 ರಷ್ಟು ಕಾರಣ ದೃಢಪಡಿಸಲು ಸಾಧ್ಯವಾಗಿಲ್ಲ. ಚಿಕ್ಕ ವಯಸ್ಸಿನವರು ಹೃದಯಾಘಾತದಿಂದ ಮೃತಪಟ್ಟಿರುವುದು ಕಳವಳಕಾರಿ. ಹಾಸನದಲ್ಲಿ ವರದಿಯಾದ ಹೃದಯಾಘಾತ ಮರಣ ಪ್ರಕರಣಗಳಲ್ಲಿ 19, 21, 23, 32, 37, 38 ಮತ್ತು 43 ವರ್ಷದವರೂ ಸೇರಿದ್ದಾರೆ. ಇವರಲ್ಲಿ ನಾಲ್ಕು ಪ್ರಕರಣಗಳ ಶವ ಪರೀಕ್ಷೆ ಮಾಡಲಾಗಿದ್ದು, ಇಬ್ಬರಿಗೆ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ಇತಿಹಾಸ ಇರುವುದು ಖಚಿತಪಟ್ಟಿದೆ’ ಎಂದು ಹೇಳಿದರು.
‘45 ವರ್ಷದೊಳಗಿನ ಏಳು ಮೃತರಲ್ಲಿ ಅನೇಕರು ಧೂಮಪಾನ, ಮದ್ಯಪಾನ, ಬೊಜ್ಜು, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಯ ಕೌಟುಂಬಿಕ ಇತಿಹಾಸ ಹೊಂದಿದ್ದರು. ಈ ಏಳು ಮಂದಿಯಲ್ಲಿ ನಾಲ್ವರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ’ ಎಂದರು.
ಅಧ್ಯಯನದ ಮುಖ್ಯಾಂಶಗಳು
ಹಾಸನದಲ್ಲಿ ಹೃದ್ರೋಗ ಸಂಬಂಧಿ ಸಾವು ಪ್ರಕರಣಗಳು ಹಿಂದಿನಂತೆಯೇ ಇದ್ದು ಯಾವುದೇ ಹೆಚ್ಚಳ ಸೂಚಿಸುವುದಿಲ್ಲ.
ಬೆಂಗಳೂರಿನ ಜಯದೇವ ಮೈಸೂರು ಮತ್ತು ಕಲಬುರಗಿ ಕೇಂದ್ರದಲ್ಲಿ ವರದಿಯಾದ ಹೃದ್ರೋಗ ಸಂಬಂಧಿ ಪ್ರಕರಣಗಳ ವಿಶ್ಲೇಷಣೆಯಿಂದಲೂ ಕಳೆದ 6 ತಿಂಗಳಲ್ಲಿ ಹೃದಯ ಸಂಬಂಧಿ ಸಾವು ರಾಜ್ಯದಲ್ಲಿ ಹೆಚ್ಚುತ್ತಿಲ್ಲ.
ಕಿರಿಯ ವಯಸ್ಸಿನಲ್ಲಿ ಹಠಾತ್ ಸಾವುಗಳು ಸಂಭವಿಸುತ್ತಿರುವುದು ಹೃದಯ ಸಂಬಂಧಿ ಕಾಯಿಲೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ
‘ಚಾಲಕರಿಗೆ ಹೃದಯ ತಪಾಸಣೆ’
‘ಹಾಸನದಲ್ಲಿ ಎರಡು ತಿಂಗಳಲ್ಲಿ ವರದಿಯಾದ 20 ಹೃದಯಾಘಾತ ಮರಣ ಪ್ರಕರಣಗಳಲ್ಲಿ 6 ಮಂದಿ ಆಟೊ ರಿಕ್ಷಾ ಮತ್ತು ಕ್ಯಾಬ್ ಚಾಲಕರಾಗಿದ್ದಾರೆ. ಇದರಿಂದಾಗಿ ಆಟೊ ರಿಕ್ಷಾ ಕ್ಯಾಬ್ ಮತ್ತು ಸಾರ್ವಜನಿಕ ಸಾರಿಗೆ ಚಾಲಕರು ಕಿರಿಯ ವಯಸ್ಸಿನಲ್ಲಿಯೇ ಹೃದ್ರೋಗದ ಅಪಾಯ ಎದುರಿಸುತ್ತಿರುವುದು ತಿಳಿದುಬಂದಿದೆ. ಜಯದೇವ ಸಂಸ್ಥೆಯ ಅಧ್ಯಯನದ ಪ್ರಕಾರವೂ ಹೃದಯಾಘಾತ ಪ್ರಕರಣಗಳಲ್ಲಿ ಶೇ 30 ರಷ್ಟು ಮಂದಿ ಆಟೊ ರಿಕ್ಷಾ ಮತ್ತು ಕ್ಯಾಬ್ ಚಾಲಕರಾಗಿದ್ದಾರೆ. ಅವರ ಜೀವನಶೈಲಿ ಸರಿಯಾಗಿ ಊಟ–ತಿಂಡಿ ಮಾಡದಿರುವುದು ಸೇರಿ ವಿವಿಧ ಕಾರಣಗಳಿವೆ. ತಜ್ಞರ ಸಮಿತಿಯ ಶಿಫಾರಸಿನ ಅನುಸಾರ ಸಾರ್ವಜನಿಕ ಸಾರಿಗೆ ಚಾಲಕರಿಗೆ ಅವರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹೃದಯ ತಪಾಸಣೆ ಶಿಬಿರಗಳನ್ನು ನಡೆಸಲಾಗುತ್ತದೆ’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು. ಅಪಾಯದ ವರ್ಗದ ಬಗ್ಗೆ ಅಧ್ಯಯನ ‘ಸಾರ್ವಜನಿಕ ಸಾರಿಗೆ ಚಾಲಕರು ಸೇರಿ ಹೃದಯಾಘಾತದ ಅಪಾಯ ಎದುರಿಸುತ್ತಿರುವ ವರ್ಗವನ್ನು ಗುರುತಿಸಲು ಜಯದೇವ ಸಂಸ್ಥೆಯು ಅಧ್ಯಯನ ನಡೆಸಿ ವರದಿ ನೀಡಲಿದೆ. ಇದರ ಆಧಾರದ ಮೇಲೆ ಅವರಿಗೆ ತಪಾಸಣೆ ತಡೆಸಿ ಹೃದ್ರೋಗ ತಡೆಯಲು ಕ್ರಮವಹಿಸುತ್ತೇವೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.
‘ಶೇ 20 ರಷ್ಟು ಪ್ರಕರಣ ಹೆಚ್ಚಳ’
‘ಹಾಸನದ ಹೃದಯಾಘಾತ ಪ್ರಕರಣಗಳು ಮಾಧ್ಯಮದಲ್ಲಿ ವರದಿಯಾದ ಬಳಿಕ ಹೃದಯ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಏರಿಕೆಯಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ಬೆಂಗಳೂರು ಮೈಸೂರು ಹಾಗೂ ಕಲಬುರಗಿ ಕೇಂದ್ರದಲ್ಲಿ ಹೃದಯ ತಪಾಸಣೆಗೆ ಭೇಟಿ ನೀಡುವ ಹೊರ ರೋಗಿಗಳ ಸಂಖ್ಯೆ ಶೇ 20 ರಷ್ಟು ಹೆಚ್ಚಳವಾಗಿದೆ. ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಳವಾದರೂ ಹೃದ್ರೋಗ ಪ್ರಕರಣಗಳು ಏರಿಕೆಯಾಗಿಲ್ಲ. ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲ’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.