ADVERTISEMENT

ಕೇಂದ್ರ ಸರ್ಕಾರ ಸಮುದ್ರ.. ಬೇಕಾದನ್ನು ಕೇಳಿ ಪಡೆಯಬೇಕು, ಟೀಕೆ ಮಾಡಬಾರದು: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 14:44 IST
Last Updated 26 ಡಿಸೆಂಬರ್ 2025, 14:44 IST
<div class="paragraphs"><p>ಬಿಡದಿ ರೈಲು ನಿಲ್ದಾಣಕ್ಕೆ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಭೇಟಿ ನೀಡಿ, ನಿಲ್ದಾಣ ನವೀಕರಣ ಕಾಮಗಾರಿ ಪರಿಶೀಲಿಸಿದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ ಎ. ಮಂಜುನಾಥ್ ಹಾಗೂ ಇತರರು ಇದ್ದಾರೆ</p></div>

ಬಿಡದಿ ರೈಲು ನಿಲ್ದಾಣಕ್ಕೆ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಭೇಟಿ ನೀಡಿ, ನಿಲ್ದಾಣ ನವೀಕರಣ ಕಾಮಗಾರಿ ಪರಿಶೀಲಿಸಿದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ ಎ. ಮಂಜುನಾಥ್ ಹಾಗೂ ಇತರರು ಇದ್ದಾರೆ

   

ಬಿಡದಿ (ರಾಮನಗರ): ‘ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರ ಸಮುದ್ರವಿದ್ದಂತೆ. ಅಲ್ಲಿ ಏನೇನು ಸಿಗುತ್ತದೊ ಅದನ್ನು ಪಡೆಯುವತ್ತ ಗಮನ ಹರಿಸಬೇಕೇ ಹೊರತು, ಸುಮ್ಮನೆ ಟೀಕೆ ಮಾಡುತ್ತಾ ಕೂರಬಾರದು’ ಎಂದು‌ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಪಟ್ಟಣದ ರೈಲು ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ನಿಲ್ದಾಣದ ನವೀಕರಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನೆಗುದಿಗೆ ಬಿದ್ದಿರುವ ಹೆಜ್ಜಾಲ–ಚಾಮರಾಜನಗರ ರೈಲು ಮಾರ್ಗದ ಯೋಜನೆ ಕುರಿತು ಏನೇನಾಗಿದೆ ಎಂಬುದರ ಫೈಲ್ ಕೊಡಿ ಎಂದು ನಾನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಹಲವರನ್ನು ಕೇಳಿದೆ. ಯಾರಿಂದಲೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಚಾಮರಾಜನಗರದ ಹಿಂದಿನ ಸಂಸದ ಧ್ರುವ ನಾರಾಯಣ್ ಅವರು ಈ ಯೋಜನೆಯನ್ನು ಪ್ರಸ್ತಾಪಿಸಿ ಇಲಾಖೆಗೆ ಪ್ರಸ್ತಾವ ಕಳಿಸಿದ್ದರು. ಆಗ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು, ಈ ಯೋಜನೆ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಿದ್ದರು. ನಾನೂ ಕನಕಪುರದವನಾಗಿದ್ದು, ನನ್ನ ತಲೆ ತುಂಬಾ ಅದೇ ಇದೆ. ಯೋಜನೆ ಜಾರಿಗೆ ನಾನೀಗ ಸಿದ್ದನಿದ್ದೇನೆ. ಅದಕ್ಕೆ ಬೇಕಾದ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಲಿ’ ಎಂದರು.

‘ಹೆಜ್ಜಾಲದಿಂದ ಚಾಮರಾಜನಗರಕ್ಕೆ 142 ಕಿ.ಮೀ. ಇದೆ. ಹೆಜ್ಜಾಲದಿಂದ ಕಗ್ಗಲೀಪುರ, ಹಾರೋಹಳ್ಳಿ, ಕನಕಪುರ, ಸಾತನೂರು, ಹಲಗೂರು, ಮಳವಳ್ಳಿ, ಕೊಳ್ಳೇಗಾಲ, ಸಂತೆಮಾರನಹಳ್ಳಿ, ಯಳಂದೂರು ಹಾಗೂ ಚಾಮರಾಜನಗರದ ನಡುವೆ ಸುಮಾರು 9 ನಿಲ್ದಾಣಗಳು ಬರಲಿವೆ’ ಎಂದು ತಿಳಿಸಿದರು.

‘ಯೋಜನೆ ಕುರಿತು ನಾನೀಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಣಕಾಸು ಕಾರ್ಯದರ್ಶಿ ಸೇರಿದಂತೆ ಹಲವರಿಗೆ ಪತ್ರ ಬರೆದು ಗಮನಕ್ಕೆ ತಂದಿರುವೆ. ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ನೀವಾದರೂ ಸಿದ್ದರಾಮಯ್ಯ ಅವರಿಗೆ ಹೇಳಿ ಭೂಮಿ ಕೊಡಿಸಿದರೆ, ನಾವು ಯೋಜನೆ ಅನುಷ್ಠಾನಗೊಳಿಸುತ್ತೇವೆ’ ಎಂದು ಪಕ್ಕದಲ್ಲಿದ್ದ ಶಾಸಕ ಬಾಲಕೃಷ್ಣ ಅವರತ್ತ ನೋಡಿ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ‘ನಾವು ಭೂಮಿ ಕೊಡುತ್ತೇವೆ. ಭೂ ಸ್ವಾಧೀನ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ದುಡ್ಡು ಕೊಡಿಸಿ’ ಎಂದು ಒತ್ತಾಯಿಸಿದರು. ಅದಕ್ಕೆ ಸೋಮಣ್ಣ, ‘ಇವೆಲ್ಲಾ ದೊಡ್ಡ ಯೋಜನೆಗಳಾಗಿದ್ದು, ಇದಕ್ಕೆ ಹಣದ ವಿಷಯವೇ ದೊಡ್ಡ ಗ್ರಹಚಾರವಾಗಿದೆ’ ಎಂದರು.

ಆಗ ಬಾಲಕೃಷ್ಣ, ‘ಕೇಂದ್ರ ಸರ್ಕಾರಕ್ಕೆ ಇದ್ಯಾವ ದೊಡ್ಡ ಯೋಜನೆ ಸರ್. ಸೋಮಣ್ಣ ಅವರಂತಹ ನಾಯಕರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧ್ಯವಾಗದು ಎಂಬುದನ್ನೆಲ್ಲಾ ಸಾಧ್ಯ ಮಾಡಿದವರು ನೀವು’ ಎಂದಾಗ, ಸಚಿವರು ನಕ್ಕು ಸುಮ್ಮನಾದರು.

ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಶಾಸಕ ಎ. ಮಂಜುನಾಥ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ಗಾಣಕಲ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಪೂರ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಕೌಲಗಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ, ಉಪ ಮುಖ್ಯ ಯೋಜನಾಧಿಕಾರಿ (ಗತಿಶಕ್ತಿ) ಶುಭಂ ಶರ್ಮ, ಹಿರಿಯ ವಿಭಾಗೀಯ ಎಂಜಿನಿಯರ್‌ ರಾಜೀವ್ ಶರ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.