ADVERTISEMENT

ಹೆಲ್ಮೆಟ್‌ ರಹಿತ ಚಾಲನೆ ಪ್ರಕರಣ | 7.92 ಲಕ್ಷ ಪ್ರಕರಣ: ₹6 ಕೋಟಿ ದಂಡ

ಜಾಗೃತಿ ಪರಿಣಾಮ: ಹೆಲ್ಮೆಟ್‌ ರಹಿತ ಚಾಲನೆ ಪ್ರಕರಣ ಇಳಿಕೆ

ಕೆ.ಎಸ್.ಸುನಿಲ್
Published 23 ಜುಲೈ 2025, 23:30 IST
Last Updated 23 ಜುಲೈ 2025, 23:30 IST
ಕಾರ್ತಿಕ್ ರೆಡ್ಡಿ
ಕಾರ್ತಿಕ್ ರೆಡ್ಡಿ   

ಬೆಂಗಳೂರು: ಸಂಚಾರ ನಿಯಮ ಕುರಿತು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಿರುವ ಪರಿಣಾಮ ಹೆಲ್ಮೆಟ್‌ ಧರಿಸದ ವಾಹನ ಸವಾರರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ.

2023ರ ಜನವರಿಯಿಂದ ಜೂನ್‌ ಅಂತ್ಯದವರೆಗೆ ಹೆಲ್ಮೆಟ್‌ ರಹಿತ ಚಾಲನೆ ಸಂಬಂಧ 20.95 ಲಕ್ಷ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 26.80 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಈ ವರ್ಷ ಮೇ ಅಂತ್ಯದವರೆಗೆ ಹೆಲ್ಮೆಟ್‌ ರಹಿತ ಚಾಲನೆಗೆ ಸಂಬಂಧಿಸಿದಂತೆ ಒಟ್ಟು 7,92,822 ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಹಿಂಬದಿ ಸವಾರರ ವಿರುದ್ಧ 4,13,157 ಪ್ರಕರಣಗಳು ದಾಖಲಾಗಿವೆ. ಒಟ್ಟು ₹ 6,31,47,900 ದಂಡ ವಸೂಲು ಮಾಡಲಾಗಿದೆ.

ADVERTISEMENT

ಸಂಚಾರ ಪೊಲೀಸರ ಪ್ರಕಾರ ನಿತ್ಯ ಸರಾಸರಿ 15,520 ಪ್ರಕರಣಗಳು ದಾಖಲಾಗುತ್ತಿವೆ. ಅಪಘಾತಕ್ಕೀಡಾಗಿ ಗಾಯಗೊಂಡವರಲ್ಲಿ ದ್ವಿಚಕ್ರ ವಾಹನ ಸವಾರರ ಸಂಖ್ಯೆಯೇ ಅಧಿಕ. ಹೆಲ್ಮೆಟ್‌ ಧರಿಸದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಡುವವರ ಸಂಖ್ಯೆಯೂ ಹೆಚ್ಚಾಗಿದೆ. ಹೆಲ್ಮೆಟ್‌ ಹಾಕಿಕೊಂಡಿದ್ದರಿಂದಲೇ ಹಲವು ಮಂದಿ ಅಪಘಾತದ ವೇಳೆ ಸಾವಿನಿಂದ ಪಾರಾಗಿರುವ ನಿದರ್ಶನಗಳು ಇವೆ.

ಅತ್ಯಾಧುನಿಕ ಕ್ಯಾಮೆರಾಗಳ ಬಳಕೆ, ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಜಾಗೃತಿಯ ಜೊತೆಗೆ ನಿಯಮ ಉಲ್ಲಂಘನೆಗಳನ್ನು ತಡೆಯಲು ನಗರ ಸಂಚಾರ ಪೊಲೀಸರು ಕೈಗೊಂಡ ಬಿಗಿ ಕ್ರಮಗಳಿಂದಾಗಿ ಹೆಲ್ಮೆಟ್‌ ರಹಿತ ವಾಹನ ಚಾಲನೆ ಪ್ರಕರಣಗಳು ತಕ್ಕ ಮಟ್ಟಿಗೆ ಇಳಿಕೆಯಾಗುತ್ತಿವೆ.

ಅಜಾಗರೂಕವಾಗಿ ವಾಹನ ಚಾಲನೆ, ಸಿಗ್ನಲ್ ಜಂಪ್, ವೇಗಮಿತಿ ಉಲ್ಲಂಘನೆ, ಸೀಟ್ ಬೆಲ್ಟ್ ಧರಿಸದಿರುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿ ಮೇ ಅಂತ್ಯಕ್ಕೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 23 ಲಕ್ಷ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ.

ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ‍್ರತಿ ವಾರವೂ ಪೊಲೀಸರು ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ಅದರಲ್ಲೂ ವಾರಾಂತ್ಯದಲ್ಲಿ ವಾಹನ ತಪಾಸಣೆ ಹೆಚ್ಚು ನಡೆಯುತ್ತಿದೆ.

ಸಂಚಾರ ನಿಯಮ ಉಲ್ಲಂಘನೆ ಮೇಲಿನ ಕಣ್ಗಾವಲಿಗೆ ಹಾಗೂ ವಾಹನ ತಪಾಸಣೆಗೆ ಇಂಟೆಲಿಜೆಂಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (ಐಟಿಎಂಎಸ್‌) ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯಡಿ ಟ್ರಾಫಿಕ್‌ ಜಂಕ್ಷನ್‌ಗಳು ಹಾಗೂ ವೃತ್ತಗಳಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಆಟೊಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಗ್ನಿಷನ್‌ (ಎಎನ್‌ಪಿಆರ್‌) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರು ಶೇಕಡ 90ರಷ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಈ ಕ್ಯಾಮೆರಾಗಳ ಮೂಲಕವೇ ಪತ್ತೆಹಚ್ಚಿ ದಂಡ ವಿಧಿಸುತ್ತಿದ್ದಾರೆ

‘ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸದಿರುವುದು, ಸಿಗ್ನಲ್‌ ಜಂಪ್‌, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ, ನಿರ್ಲಕ್ಷ್ಯದ ಚಾಲನೆ, ಅಡ್ಡಾದಿಡ್ಡಿ ಚಾಲನೆ, ಸಾರ್ವಜನಿಕ ಸೇವೆ ಒದಗಿಸುವ ವಾಹನ ಚಾಲಕರು ಸಮವಸ್ತ್ರ ಧರಿಸದಿರುವುದು, ವಿಮೆ ಮಾಡಿಸದಿರುವುದು, ವಾಹನಗಳ ನೋಂದಣಿ ಪತ್ರ ಹೊಂದಿಲ್ಲದಿರುವುದು, ಚಾಲನಾ ಪರವಾನಗಿ ಇಲ್ಲದಿರುವುದು, ಪಾದಚಾರಿ ಮಾರ್ಗದಲ್ಲಿ ವಾಹನಗಳ ನಿಲುಗಡೆ ಮಾಡುವುದು ಸೇರಿದಂತೆ ಮೋಟಾರು ವಾಹನಗಳ ಕಾಯ್ದೆ ವ್ಯಾಪ್ತಿಗೆ ಬರುವ ಉಲ್ಲಂಘನೆ ಪ್ರಕರಣಗಳು ಅಧಿಕವಾಗಿವೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಜಂಕ್ಷನ್ ಮತ್ತು ವೃತ್ತಗಳಲ್ಲಿ ಎಐ ಆಧಾರಿತ ಎಫ್‌ಟಿವಿಆರ್ ಕ್ಯಾಮೆರಾಗಳನ್ನು ಅಳವಡಿಸಿದ್ದು, ಇವು ನಿಯಮ ಉಲ್ಲಂಘಿಸುವ ವಾಹನದ ನಂಬರ್ ಪ್ಲೇಟ್‌ಗಳನ್ನು ಗುರುತಿಸುತ್ತವೆ. ಸವಾರರ ಮೊಬೈಲ್​ಗಳಿಗೆ ದಂಡದ ನೋಟಿಸ್ ಕಳುಹಿಸಲಾಗುತ್ತಿದೆ’ ಎಂದು ಸಂಚಾರ ಅಧಿಕಾರಿಗಳು ತಿಳಿಸಿದ್ಧಾರೆ.

ನಗರದಲ್ಲಿ ಇತ್ತೀಚೆಗೆ ಶಾಲಾ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಿದರು. –‍ಪ‍್ರಜಾವಾಣಿ ಚಿತ್ರ

ಹೆಲ್ಮೆಟ್ ರಹಿತ ಸವಾರರಿಂದ ದಂಡ ವಸೂಲು ವರ್ಷ; ದಂಡ2023; ₹45,77,93,6502024; ₹13,93,20,6002025(ಮೇ ಅಂತ್ಯಕ್ಕೆ); ₹6,31,47,900. ಐದು ತಿಂಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ

*ಹೆಲ್ಮೆಟ್‌ರಹಿತ ವಾಹನ ಚಾಲನೆ;7,92,822

*ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದು;4,13,157

*ಸೀಟ್ ಬೆಲ್ಟ್ ಧರಿಸದಿರುವುದು;3,22,846

*ಸಿಗ್ನಲ್ ಜಂಪ್ ;2,56,881

*ತಪ್ಪಾಗಿ ವಾಹನ ನಿಲುಗಡೆ ;2,56,766

*ಪಾನಮತ್ತ ಚಾಲನೆ ;15,151 *ವೇಗಮಿತಿ ಉಲ್ಲಂಘನೆ ;13,237

ಐಎಸ್​ಐ ಮಾರ್ಕ್‌ನ ಹೆಲ್ಮೆಟ್‌ ಧರಿಸಿ ಮೋಟಾರು ವಾಹನ ಕಾಯ್ದೆಯ ಅನ್ವಯ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರು ಐಎಸ್‌ಐ ಮಾರ್ಕ್‌ನ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವುದು ಕಡ್ಡಾಯ. ಜಾಗೃತಿಯ ಪರಿಣಾಮವಾಗಿ ಎರಡು ವರ್ಷಗಳಿಗೆ ಹೋಲಿಸಿದರೆ ಐದು ತಿಂಗಳಲ್ಲಿ ಹೆಲ್ಮೆಟ್ ರಹಿತ ವಾಹನ ಚಾಲನೆ ಪ್ರಕರಣಗಳು ಕಡಿಮೆಯಾಗಿವೆ. ಇದು ಒಳ್ಳೆಯ ಬೆಳವಣಿಗೆ. ಐಟಿಎಂಎಸ್‌ ವ್ಯವಸ್ಥೆಯಿಂದ ನಗರದಲ್ಲಿ ಅಳವಡಿಸಿರುವ ಎಐ ಆಧಾರಿತ ಕ್ಯಾಮೆರಾ ಹಾಗೂ ಇನ್ನಿತರ ಸುಧಾರಿತ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರನ್ನು ಸ್ವಯಂಪ್ರೇರಿತವಾಗಿ ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. – ಕಾರ್ತಿಕ್ ರೆಡ್ಡಿ ಜಂಟಿ ಪೊಲೀಸ್ ಆಯುಕ್ತ ಸಂಚಾರ ವಿಭಾಗ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.