ADVERTISEMENT

ಕಡತನಮಲೆ ಕೆರೆ ಅಭಿವೃದ್ಧಿ ದೂರ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 4:50 IST
Last Updated 30 ಅಕ್ಟೋಬರ್ 2019, 4:50 IST
ಕಡತನಮಲೆ ಕೆರೆ
ಕಡತನಮಲೆ ಕೆರೆ   

ಹೆಸರಘಟ್ಟ: ಕೆರೆಯ ಒಡಲ ತುಂಬಾ ಸುರಿದ ಕಸ, ಅಲಲ್ಲಿ ಬೆಳೆದ ಕುರುಚಲು ಗಿಡಗಳು, ಮಣ್ಣಿಗಾಗಿ ಅಗೆದ ಗುಂಡಿಗಳು... ಇವೆಲ್ಲವು ಕಡತನಮಲೆ ಗ್ರಾಮದ ಕೆರೆಯ ದುಸ್ಥಿತಿ ಚಿತ್ರಗಳು.

ಗ್ರಾಮದ ಸರ್ವೆ ನಂ 36ರಲ್ಲಿ 24 ಎಕರೆ ಐದು ಕುಂಟೆ ವಿಸ್ತೀರ್ಣದ ಕೆರೆ ಇದೆ. ಜಲಮೂಲದ ದಡದ ಅಸುಪಾಸಿನ ಸುಮಾರು ಐವತ್ತು ಎಕರೆಯಲ್ಲಿ ರಾಗಿ, ಮೆಕ್ಕೆಜೋಳ, ಗುಲಾಬಿ ಹೂ, ಮಾವಿನ ಹಣ್ಣು, ವಿವಿಧ ತರಕಾರಿಗಳನ್ನು ರೈತರು ಬೆಳೆಯುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಜೀವಾಳವಾದ ಕೆರೆಯನ್ನು ಐವತ್ತು ವರ್ಷಗಳಿಂದಲೂ ಅಭಿವೃದ್ಧಿಪಡಿಸಿಲ್ಲ ಎನ್ನುವ ಕೊರಗು ಗ್ರಾಮಸ್ಥರಲ್ಲಿದೆ.

‘ಕೆರೆಯಲ್ಲಿ ಮಳೆಗಾಲದಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತದೆ. ಈ ನೀರಿನಿಂದ ಅನೇಕ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳ
ವಾಗುತ್ತದೆ. ಅದರೆ, ನೀರು ಮೂರು ತಿಂಗಳಲ್ಲೇ ಇಂಗಿ ಹೋಗುತ್ತದೆ. ಇದರಿಂದ ಹೆಚ್ಚಿದ ಅಂತರ್ಜಲ ಕುಸಿದು ಕೃಷಿ ಚಟುವಟಿಕೆಗೆ ನೀರು ಇಲ್ಲದಂತೆ ಆಗುತ್ತಿದೆ’ ಎಂದು ಗ್ರಾಮದ ನಿವಾಸಿ ಸಂತೋಷ್ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಕೆರೆ ಬರುತ್ತದೆ. ಪಂಚಾಯಿತಿ ಅಧಿಕಾರಿಗಳಿಗೆ ಜಲಮೂಲದ ಬಗ್ಗೆ ಕನಿಷ್ಠ ಕಾಳಜಿ ಇಲ್ಲ. ಜಲಮೂಲವನ್ನು ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಸಲ್ಲಿಸಿದ ಮನವಿಗಳೆಲ್ಲವೂ ಕಸದ ಬುಟ್ಟಿಗೆ ಸೇರಿವೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ಜಲಮೂಲದ ಅಂಗಳದಲ್ಲಿ ಅನೇಕ ಪಕ್ಷಿಗಳು ನೆಲೆಗೊಂಡಿವೆ. ವಿವಿಧ ಜಾತಿಯ ಕೊಕ್ಕರೆಗಳು ಚಳಿಗಾಲದಲ್ಲಿ ಸಂತಾನೋತ್ಪತ್ತಿಗೆ
ಇಲ್ಲಿಗೆ ಬರುತ್ತವೆ. ನೀರಿನ ಮಟ್ಟ ಕುಸಿದು ಹೋಗಿರುವುದರಿಂದ ಪಕ್ಷಿಗಳ ಸಂಖ್ಯೆ ಇಳಿಮುಖವಾಗುತ್ತಿದೆ’ ಎಂದು ಯಲಹಂಕದ ಪಕ್ಷಿ ಛಾಯಾಗ್ರಾಹಕ ನಂದನ್ ಕಳವಳ ತೋಡಿಕೊಂಡರು.

ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ವಿಶ್ವನಾಥ್ ಪ್ರತಿಕ್ರಿಯಿಸಿ, ‘ಹೂಳು ಮತ್ತು ಕುರುಚಲು ಗಿಡಗಳನ್ನು ತೆಗೆಸಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.