ADVERTISEMENT

ಹೆಸರಘಟ್ಟ: ಕಾವೇರಿತು ಚುನಾವಣೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 20:56 IST
Last Updated 15 ಡಿಸೆಂಬರ್ 2020, 20:56 IST

ಹೆಸರಘಟ್ಟ: ಹೋಬಳಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ಏರತೊಡಗಿದ್ದು, ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಹೆಸರಘಟ್ಟ ಹೋಬಳಿ ವ್ಯಾಪ್ತಿಯಲ್ಲಿ ಏಳು ಗ್ರಾಮ ಪಂಚಾಯಿತಿಗಳಿಗೆ 167 ಸದಸ್ಯರ ಆಯ್ಕೆ ನಡೆಯಲಿದೆ. ನಾಮಪತ್ರ ಸಲ್ಲಿಸಿದ್ದ 628 ಜನರ ಪೈಕಿ 472 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಶೇ 30ರಷ್ಟು ಅಭ್ಯರ್ಥಿಗಳು ಹೊಸಬರಾಗಿದ್ದು, ಶೇಕಡ 70ರಷ್ಟು ಹಳೆಯ ಅಭ್ಯರ್ಥಿಗಳೇ ಸ್ಪರ್ಧಿಸುತ್ತಿದ್ದಾರೆ. ರಾಜಾನುಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಎರಡು ಬಾರಿ ಗೆದ್ದಿದ್ದ ನಾಲ್ವರು ಅಭ್ಯರ್ಥಿಗಳು ಮೂರನೇಯ ಬಾರಿ ಸ್ಪರ್ಧಿಸುತ್ತಿದ್ದಾರೆ.

ADVERTISEMENT

ಕಸಘಟ್ಟಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಣಿ ಅಗ್ರಹಾರ ಗ್ರಾಮದಲ್ಲಿ ಮಹಿಳಾ ಅಭ್ಯರ್ಥಿ ಮತ್ತು ಬ್ಯಾಲಕೆರೆ ಗ್ರಾಮದಲ್ಲಿ ಪುರುಷ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹುರುಳಿಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐವರಕಂಡಪುರ ಗ್ರಾಮದಲ್ಲಿ ಮಹಿಳೆ ಮತ್ತು ಕೊಡಗಿ ತಿರುಮಲಾಪುರ ಗ್ರಾಮದಲ್ಲಿ ಪುರುಷ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಹೆಸರಘಟ್ಟ, ಅರಕೆರೆ, ಸೊಣೇನಹಳ್ಳಿ ಮತ್ತು ಹುರಳಿ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅಭ್ಯರ್ಥಿಗಳು ತಮ್ಮ ವಾರ್ಡ್‌ ಅಭಿವೃದ್ಧಿ ಕುರಿತು ಹೊಸ ಹೊಸ ಭರವಸೆಗಳನ್ನು ನೀಡುವ ಮೂಲಕ ಮತದಾರರನ್ನು ಸೆಳೆಯುವ ತಂತ್ರ ಅನುಸರಿಸುತ್ತಿದ್ದಾರೆ.

‘ಚುನಾವಣೆ ಶಾಂತಿಯುತವಾಗಿ ನಡೆಯಲು ಎಲ್ಲ ಸಿದ್ದತೆಗಳನ್ನು ಅಧಿಕಾರಿ ವರ್ಗ ಮಾಡಿಕೊಂಡಿದೆ. ಏಳು ಗ್ರಾಮ ಪಂಚಾಯಿತಿಯಲ್ಲಿ ಕಾನೂನು ಪಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದುಯಲಹಂಕ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಿಶೋರ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.