ADVERTISEMENT

‘ಕಂಟೈನ್‌ಮೆಂಟ್ ವಲಯ ಮೇಲುಸ್ತುವಾರಿ ನೇಮಕ’

ರಾಜ್ಯ ಸರ್ಕಾರ ಮಾಹಿತಿ: ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕೆಂಡಾಮಂಡಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 21:56 IST
Last Updated 16 ಜುಲೈ 2020, 21:56 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನಗರದ ಕಂಟೈನ್‌ಮೆಂಟ್ ವಲಯದಲ್ಲಿ ಎಸ್‌ಒಪಿ (ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ) ಮಾರ್ಗಸೂಚಿಗಳನ್ನು ಬಿಬಿಎಂಪಿ ಪಾಲಿಸುತ್ತಿರುವ ಬಗ್ಗೆ ಮೇಲುಸ್ತುವಾರಿ ವಹಿಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ. ಕುಮಾರನಾಯಕ ಅವರನ್ನು ನೇಮಿಸಲಾಗುತ್ತಿದೆ’ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

‘ಕಂಟೈನ್‌ಮೆಂಟ್ ವಲಯ ನಿರ್ವಹಣೆ ಹೇಗಿದೆ ಎಂಬುದರ ಕುರಿತು ಜುಲೈ 24ರೊಳಗೆ ವರದಿ ನೀಡಬೇಕು’ ಎಂದು ಕುಮಾರನಾಯಕ ಅವರಿಗೆ ಆದೇಶಿಸಿದೆ.

ಕೋವಿಡ್ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಪೀಠ, ಕುಮಾರನಾಯಕ ಅವರ ನೇಮಕ ಕುರಿತ ಅಧಿಸೂಚನೆಯನ್ನು ಕೂಡಲೇ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೂ ನಿರ್ದೇಶನ ನೀಡಿತು.

ADVERTISEMENT

‘ನ್ಯಾಯಾಲಯದ ಆದೇಶ ಪಾಲಿಸಲೇಬಾರದು ಎಂಬ ನಿರ್ಧಾರವನ್ನು ಬಿಬಿಎಂಪಿ ಕೈಗೊಂಡಿದೆಯೇ’ ಎಂದು ಪ್ರಶ್ನಿಸಿದ ಪೀಠ, ‘ಮೊದಲ ಆದೇಶ ಹೊರಡಿಸಿ 21 ದಿನ ಕಳೆದಿವೆ. ಇದು ಕೋರ್ಟ್‌ ವಿಚಾರಣೆಯನ್ನು ಅಪಹಾಸ್ಯ ಮಾಡಿದಂತೆ. ಕೆಎಂಸಿ ಕಾಯ್ದೆ ಪ್ರಕಾರ ಬಿಬಿಎಂಪಿಯನ್ನು ವಿಸರ್ಜನೆಗೊಳಿಸಲು ಇದು ಅತ್ಯಂತ ಯೋಗ್ಯವಾದ ಪ್ರಕರಣ’ ಎಂದು ಎಚ್ಚರಿಸಿತು.

‘ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನ್ಯಾಯಾಲಯಕ್ಕೆ ಹಾಜರಾದ ಬಳಿಕವೂ ಕಂಟೈನ್‌ಮೆಂಟ್ ವಲಯಗಳ ಪರಿಸ್ಥಿತಿ ಸುಧಾರಿಸಿಲ್ಲ. ಪಾಲಿಕೆ ಆಡಳಿತ ಯಂತ್ರ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಅರಿವು ನಮಗಿದೆ. ಆದರೂ ಎಸ್‌ಒಪಿ ಅನುಸರಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿತು.

‘ನ್ಯಾಯಾಂಗ ನಿಂದನೆ ಆರೋಪದಲ್ಲಿ ಪಾಲಿಕೆ ಹಿರಿಯ ಅಧಿಕಾರಿಗಳನ್ನು. ಜೈಲಿಗೆ ಕಳುಹಿಸಬಹುದು. ಆದರೆ, ಅದು ಸಮಸ್ಯೆ ಪರಿಹಾರ ಆಗುವುದಿಲ್ಲ ಎಂಬ ಅರಿವೂ ಇದೆ. ಈಗ ಕಂಟೈನ್‌ಮೆಂಟ್ ವಲಯಗಳಲ್ಲಿ ಎಸ್‌ಒಪಿ ಅನುಸರಿಸುವುದು ಮುಖ್ಯ. ಅಲ್ಲಿನ ಜನರಿಗೆ ಆಹಾರ ಪ್ಯಾಕೇಟ್ ಮತ್ತು ದಿನಸಿ ಪೂರೈಕೆಯಾಗಬೇಕು’ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.