ADVERTISEMENT

ಗಾಂಧೀಜಿ ಸ್ಮಾರಕಕ್ಕೆ ಪ್ರವೇಶ: 12 ವಾರಗಳಲ್ಲಿ ಇತ್ಯರ್ಥಕ್ಕೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 20:04 IST
Last Updated 28 ಜನವರಿ 2019, 20:04 IST
   

ಬೆಂಗಳೂರು: ‘ನಗರದ ಕುಮಾರ ಕೃಪಾ ರಸ್ತೆಯಲ್ಲಿರುವ ಹೋಟೆಲ್‌ ಲಲಿತ್ ಅಶೋಕ ಆವರಣದಲ್ಲಿನ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಸ್ಮಾರಕವನ್ನು ಸಾರ್ವಜನಿಕರ ಭೇಟಿಗೆ ಮುಕ್ತಗೊಳಿಸಬೇಕು ಎಂಬ ಮನವಿಯನ್ನು 12 ವಾರಗಳಲ್ಲಿ ಪರಿಗಣಿಸಿ ಇತ್ಯರ್ಥಪಡಿಸಿ’ ಎಂದು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ನಗರದ ‘ಸಮರ್ಪಣಾ’ ಹೆಸರಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯ ‍ಪ್ರಧಾನ ಕಾರ್ಯದರ್ಶಿ ಶಿವಕುಮಾರ ಹೊಸಮನಿ ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಲೇವಾರಿ ಮಾಡಿದೆ.

ಏನಿದು ಪಿಐಎಲ್ ?: ‘1927ರಲ್ಲಿ ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಮಯದಲ್ಲಿ ಈಗಿನ ಅಶೋಕ ಹೋಟೆಲ್‌ ಇರುವ ಸ್ಥಳದಲ್ಲಿ ಅನೇಕ ದಿನಗಳವರೆಗೆ ಸಾರ್ವಜನಿಕ ಸಭೆ ಮತ್ತು ಪ್ರಾರ್ಥನೆ ನಡೆಸಿದ್ದರು. ಇಲ್ಲೊಂದು ಜ್ಯೋತಿ ವೃಕ್ಷದ ಹೆಸರಲ್ಲಿ ಗಿಡ ನೆಟ್ಟಿದ್ದರು. ಅದಕ್ಕೀಗ ಸ್ಮಾರಕ ನಿರ್ಮಿಸಲಾಗಿದೆ. ಸದ್ಯ ಇದು ಅಶೋಕ ಹೊಟೇಲ್ ಆವರಣದಲ್ಲಿದೆ. ಆದರೆ, ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ನಿರ್ಬಂಧವಿದೆ’ ಎಂಬುದು ಅರ್ಜಿದಾರರ ಆಕ್ಷೇಪ.

ADVERTISEMENT

‘ಸಾರ್ವಜನಿಕರನ್ನು ಒಳಗೆ ಬಿಡಲು ಹೋಟೆಲ್‌ನವರಿಗೆ ಇರಬಹುದಾದ ಕಾರಣಗಳ ಬಗ್ಗೆ ನಮಗೆ ಆಸಕ್ತಿಯಿಲ್ಲ. ಆದರೆ, ಗಾಂಧಿ ಜಯಂತಿ ಹಾಗೂ ಹುತಾತ್ಮರ ದಿನಗಳಂದು ಈ ಪ್ರದೇಶದಲ್ಲಿ ಸಾರ್ವಜನಿಕರಿಗೆ ದೇಶಭಕ್ತಿ ಗೀತೆ, ಭಜನೆಗಳನ್ನು ಆಯೋಜಿಸಲು ಈ ಜಾಗ ಮುಕ್ತವಾಗಿರಬೇಕು ಎಂದು ನಾವು ಬಯಸುತ್ತೇವೆ. ಹಾಗಾಗಿ ಈ ಪ್ರದೇಶದ ಭೇಟಿಗೆ ಅವಕಾಶ ನೀಡಲು ನಿರ್ದೇಶಿಸಬೇಕು’ ಎಂದು ಕೋರಿದ್ದರು. ಅರ್ಜಿದಾರರ ಪರ ಜಿ.ಆರ್.ಮೋಹನ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.