ADVERTISEMENT

ಈದ್ಗಾ ಮೈದಾನದಲ್ಲಿ ಅನ್ಯ ಕಾರ್ಯಕ್ರಮಕ್ಕೂ ಅವಕಾಶ ನೀಡಿ: ಬಿಬಿಎಂಪಿಗೆ ಮನವಿ

ಹಿಂದೂ ಸಂಘಟನೆಗಳಿಂದ ಮನವಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:31 IST
Last Updated 7 ಜೂನ್ 2022, 19:31 IST
ಈದ್ಗಾ ಮೈದಾನ
ಈದ್ಗಾ ಮೈದಾನ   

ಬೆಂಗಳೂರು: ಈದ್ಗಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ಮೂರು ಹಿಂದೂಪರ ಸಂಘಟನೆಗಳು ಬಿಬಿಎಂಪಿ ಬಾಗಿಲು ತಟ್ಟಿವೆ.

ಶ್ರೀರಾಮ ಸೇನೆ, ವಿಶ್ವ ಸನಾತನ ಪರಿಷದ್, ವಂದೆ ಮಾತರಂ ಸಮಾಜ ಸೇವಾ ಸಂಸ್ಥೆಗಳು ಬಿಬಿಎಂಪಿ ಪಶ್ಚಿಮ ವಲಯ ಕಚೇರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿವೆ. ‘ಜೂನ್ 21ರಂದು ಯೋಗ ದಿನ, ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ, ಆಗಸ್ಟ್‌ 14 ಮತ್ತು 15ರಂದು ಆಜಾದಿ ಕಾ ಅಮೃತ್‌ ಮಹೋತ್ಸವ ಆಚರಿಸಲು ಅವಕಾಶ ನೀಡಬೇಕು’ ಎಂದು ಕೋರಿವೆ.

‘ಈದ್ಗಾ ಮೈದಾನ ಸಾರ್ವಜನಿಕ ಆಸ್ತಿ. ಸ್ವಾತಂತ್ರ್ಯ ದಿನದಂದು ಧ್ವಜಾರೋಹಣಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಅದೇ ಜಾಗದಲ್ಲಿ ಸ್ವಾತಂತ್ರ್ಯ ದಿನ ಆಚರಣೆಗೆ ಮುಸ್ಲಿಂ ಸಮುದಾಯ ಯೋಜನೆ ರೂಪಿಸಿದ್ದರೆ, ನಮ್ಮ ಮನವಿ ಕೈ ಬಿಡುತ್ತೇವೆ’ ಎಂದು ವಿಶ್ವ ಸನಾತನ ಪರಿಷದ್‌ನ ಅಧ್ಯಕ್ಷ ಎಸ್. ಭಾಸ್ಕರನ್ ತಿಳಿಸಿದರು.

ADVERTISEMENT

‘ಈದ್ಗಾ ಮೈದಾನ ಬಿಬಿಎಂಪಿ ಆಸ್ತಿ. ಪಶ್ಚಿಮ ವಲಯದ ಜಂಟಿ ಆಯುಕ್ತರ ಉಸ್ತುವಾರಿಯಲ್ಲಿ ಈ ಮೈದಾನ ಇದೆ. ಮುಸ್ಲಿಂ ಸಮುದಾಯ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಎರಡು ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಬೇರೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಅವಕಾಶ ಇದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ಹರೀಶ್‌ಕುಮಾರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.

‌ಪೊಲೀಸರಿಗೆ ಈ ರೀತಿಯ ಮನವಿಗಳು ಬರುತ್ತಿದ್ದರೂ, ಕೋಮು ಗಲಭೆ ನಡೆಯುವ ನಿರೀಕ್ಷೆಯಿಂದ ಅನುಮತಿ ನಿರಾಕರಿಸುತ್ತಿದ್ದರು. ಚಾಮರಾಜಪೇಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಆರ್‌ಎಸ್‌ಎಸ್‌ 2013ರಲ್ಲಿ ಈದ್ಗಾ ಮೈದಾನದ ಮೂಲಕ ಮೆರವಣಿಗೆ ನಡೆಸಲು ಅವಕಾಶ ಕೇಳಿತ್ತು. ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವುದರಿಂದ ಪೊಲೀಸರು ಅನುಮತಿ ನಿರಾಕರಿಸಿದ್ದರು.

‘ಆಟದ ಮೈದಾನದಲ್ಲಿ ಕ್ರೀಡಾ ಚಟುವಟಿಕೆ ಬದಲು ಯಾವುದೇ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿದರೆ ಕೋಮು ಸೌಹಾರ್ದಕ್ಕೆ ಧಕ್ಕೆ ಆಗಬಹುದು. ನಾವು ಪ್ರತಿವರ್ಷ ಈ ಜಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಆಚರಿಸುತ್ತೇವೆ. ಪ್ರತ್ಯೇಕವಾಗಿ ರಾಷ್ಟ್ರಧ್ವಜ ಹಾರಿಸುವ ಬದಲು ನಮ್ಮೊಂದಿಗೆ ಸೇರಿಕೊಳ್ಳಲಿ’ ಎಂದು ಈದ್ಗಾ ಮೈದಾನ ಮತ್ತು ಅಂಜುಮನ್–ಎ–ಇಸ್ಲಾಮಿಯಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಖಾನ್ ಹೇಳಿದರು.

‘ಆಟದ ಮೈದಾನದ ಬಲ ಭಾಗದಲ್ಲಿ ದಶಕಗಳಿಂದ ಈದ್ಗಾ ಗೋಡೆ ಇದೆ. ಆದ್ದರಿಂದ ಈ ಜಾಗದಲ್ಲಿ ಯಾವುದೇ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ಮುಸ್ಲಿಂ ಸಮುದಾಯ ವಿರೋಧಿಸುತ್ತದೆ’ ಎಂದರು.

‘ಕರ್ನಾಟಕ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಕಾಯ್ದೆ–2021 ಪ್ರಕಾರ ಈದ್ಗಾ ಗೋಡೆಯನ್ನು ಸಂರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಸರ್ಕಾರಿ ಅಥವಾ ಖಾಸಗಿ ಜಾಗದಲ್ಲಿದ್ದರೂ ಅದನ್ನು ಉಳಿಸಬೇಕಾಗುತ್ತದೆ. ನೂರಾರು ದೇವಸ್ಥಾನಗಳು ಸರ್ಕಾರದ ಜಾಗದಲ್ಲಿವೆ. ಸರ್ಕಾರಿ ಜಾಗ ಎಂಬ ಕಾರಣಕ್ಕೆ ನಾವು ದೇವಸ್ಥಾನದ ಬಳಿ ಸಾಮೂಹಿಕ ಪ್ರಾರ್ಥನೆ ಮಾಡಲು ಹೋಗುವುದಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.