ಮುಜೀಬುರ್ ರೆಹಮಾನ್
ಬೆಂಗಳೂರು: ಹಿಂದುತ್ವದಲ್ಲಿ ಮುಸ್ಲಿಮರಿಗೂ ಜಾಗ ಇದೆ ಎಂದು ಆರ್‌ಎಸ್‌ಎಸ್ ನಾಯಕರು ಹೇಳಿದ್ದರು. ಆದರೆ, ಅವರು ನೀಡುವ ಜಾಗ ಯಾವುದು? ಸಹಸ್ರಾರು ವರ್ಷಗಳಿಂದ ಇಲ್ಲಿನ ದಲಿತರಿಗೆ ಯಾವ ಸ್ಥಾನ ನೀಡಿದ್ದಾರೋ ಅದೇ ಸ್ಥಾನವಲ್ಲವೇ ಎಂದು ದೆಹಲಿಯ ಜಾಮಿಯಾ ಮಿಲಿಯಾ ಕೇಂದ್ರೀಯ ವಿಶ್ವವಿದ್ಯಾಲಯದ ಉಪನ್ಯಾಸಕ ಮುಜೀಬುರ್ ರೆಹಮಾನ್ ಪ್ರಶ್ನಿಸಿದರು.
ಅವರು ರಚಿಸಿರುವ ‘ಶಿಕ್ವಾ–ಎ–ಹಿಂದ್: ದಿ ಪೊಲಿಟಿಕಲ್ ಫ್ಯೂಚರ್ ಆಫ್ ಇಂಡಿಯನ್ ಮುಸ್ಲಿಮ್ಸ್’ ಕೃತಿಯ ಆಧಾರದಲ್ಲಿ ಶುಕ್ರವಾರ ಜಾಗೃತ ಕರ್ನಾಟಕ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್‌ಎಸ್‌ಎಸ್ ಮತ್ತು ಇಸ್ಲಾಮಿಕ್ ಸ್ಟೇಟ್ (ಐಎಸ್) ಅನ್ನು ಸಮೀಕರಿಸಿ ರಾಹುಲ್ ಗಾಂಧಿ ಮಾತನಾಡಿದ್ದರು. ಆಗ ಆರ್‌ಎಸ್ಎಸ್ ಮೂರು ದಿನಗಳ ಸಮಾವೇಶ ಹಮ್ಮಿಕೊಂಡು 60ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳನ್ನು ಕರೆಸಿ ಸ್ಪಷ್ಟನೆ ನೀಡಿದ್ದರು. ಇದು ಹೇಗೆ ಒಂದು ಸಾಂಸ್ಕೃತಿಕ ಸಂಘಟನೆ ಎಂಬುದನ್ನು, ಬೆಳೆದು ಬಂದ ಹಾದಿಯನ್ನು ತಿಳಿಸಿದ್ದರು. ಮುಸ್ಲಿಮರಿಗೂ ಹಿಂದುತ್ವದಲ್ಲಿ ಜಾಗ ಇದೆ ಎಂಬುದಾಗಿಯೂ ಹೇಳಿದ್ದರು. ಯಾವ ಜಾಗ ಎಂಬುದು ಈ ಕೃತಿಯಲ್ಲಿ ಚರ್ಚಿಸಲಾಗಿದೆ ಎಂದು ವಿವರಿಸಿದರು.
ಮುಸ್ಲಿಂ ಅಥವಾ ಇಸ್ಲಾಂ ಇಲ್ಲವಾಗಿಸಿ ರಾಕ್ಷಸರಷ್ಟೇ ಇರುವುದು ಎಂಬಂತೆ ಈಗ ಬಿಂಬಿಸಲಾಗುತ್ತಿದೆ. ಒಬ್ಬ ವ್ಯಕ್ತಿ ತನ್ನ ಹೆಸರು ಹೇಳಿದಾಗ ಆತ ಮುಸ್ಲಿಂ ಎಂದು ಗೊತ್ತಾದರೆ ಅಲ್ಲಿಗೆ ಇತಿಹಾಸವೇ ತೆರೆದುಕೊಳ್ಳುತ್ತದೆ. ಬಾಬರ್, ಔರಂಗಜೇಬ್ ಮತ್ತಿತರರ ಪ್ರತಿನಿಧಿಯಂತೆ ಕಾಣತೊಡಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಬರುವ ಸಮಯದಲ್ಲಿ ಮೂರು ಪ್ರಮುಖ ರಾಜಕೀಯ ಸಿದ್ಧಾಂತಗಳಿದ್ದವು. ಜಾತ್ಯತೀತ ತತ್ವವನ್ನು ಪ್ರತಿಪಾದಿಸುವ ಕಾಂಗ್ರೆಸ್, ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಇರಬೇಕು ಎನ್ನುವ ಮುಸ್ಲಿಂ ಲೀಗ್, ಭಾರತವು ಜಾತ್ಯತೀತ ರಾಷ್ಟ್ರವಲ್ಲ, ಹಿಂದೂ ರಾಷ್ಟ್ರವಾಗಬೇಕು ಎಂದು ಪ್ರತಿಪಾದಿಸುವವರು ಇದ್ದರು. ಸ್ವಾತಂತ್ರ್ಯ ಬಂದಾಗ ಕಾಂಗ್ರೆಸ್ ಭಾರತದಲ್ಲಿ ಅಧಿಕಾರ ಹಿಡಿಯಿತು. ಮುಸ್ಲಿಂ ಲೀಗ್ ಆಶಯದಂತೆ ಪಾಕಿಸ್ತಾನ ಸೃಷ್ಟಿಯಾಯಿತು. ಹಿಂದೂ ರಾಷ್ಟ್ರ ಪ್ರತಿಪಾದಕರು ಬಹಳ ಸಣ್ಣ ಪ್ರಮಾಣದಲ್ಲಿದ್ದರು ಎಂದು ಹೇಳಿದರು.
ಹಿಂದೂ ಮುಸ್ಲಿಂ ಗಲಭೆಗಳನ್ನು ಸೃಷ್ಟಿಸಿ, ಮುಸ್ಲಿಮರ ಬಗ್ಗೆ ಭಯವನ್ನು ಹರಡಿ, ದೇಶಕ್ಕೆ ಮುಸ್ಲಿಮರೇ ಆತಂಕ ಎಂಬಂತೆ ಬಿಂಬಿಸುತ್ತಾ ಬಂದ ಹಿಂದೂ ರಾಷ್ಟ್ರವಾದಿಗಳು ಅಧಿಕಾರ ಹಿಡಿದಿದ್ದಾರೆ ಎಂದು ತಿಳಿಸಿದರು.
ಪ್ರಾಧ್ಯಾಪಕ ಎ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಜಾಗೃತ ಕರ್ನಾಟಕದ ಡಾ. ಎಚ್.ವಿ. ವಾಸು, ಸುಹೇಲ್ ಅಹಮದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.