ADVERTISEMENT

ಮಗಳನ್ನೇ ಬಳಸಿ ಹನಿಟ್ರ್ಯಾಪ್‌ ಆರೋಪ: ದಂಪತಿ ಬಂಧನ

ಬ್ಲ್ಯಾಕ್‌ಮೇಲ್‌ ಆರೋಪ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 7:09 IST
Last Updated 24 ಅಕ್ಟೋಬರ್ 2019, 7:09 IST
   

ಬೆಂಗಳೂರು: ಮಗಳನ್ನೇ ಹನಿಟ್ರ್ಯಾಪ್‌ಗೆ ಬಳಸಿ, ಉಪನ್ಯಾಸಕಿಯೊಬ್ಬರನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲೀನಾ ಕವಿತಾ ಮತ್ತು ಪ್ರಮೋದ್‌ ಬಂಧಿತರು. ಇಬ್ಬರನ್ನೂ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

‘ಡೇಟಿಂಗ್‌ ಆ್ಯಪ್‌’ ಮೂಲಕ ದೂರುದಾರ ಉಪನ್ಯಾಸಕಿಯ ಪುತ್ರ ಮತ್ತು ಬಂಧಿತ ದಂಪತಿಯ ಪುತ್ರಿ ಪರಿಚಿತರಾಗಿದ್ದು, ಬಳಿಕ ಪರಿಚಯ, ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ.

ADVERTISEMENT

‘ಜೂನ್‌ 12ರಂದು ಕರೆ ಮಾಡಿದ್ದ ದಂಪತಿ, ನಿಮ್ಮ ಮಗ ಮತ್ತು ನಮ್ಮ ಮಗಳು ವಸತಿಗೃಹವೊಂದರಲ್ಲಿ ರಾತ್ರಿ ತಂಗಿದ್ದು, ಮಗಳು ಗರ್ಭಿಣಿಯಾಗಿದ್ದಾಳೆ. ಅವರಿಬ್ಬರೂ ಜೊತೆಗಿದ್ದ ಫೋಟೊ ಮತ್ತು ವಿಡಿಯೊ ತುಣುಕುಗಳು ನಮ್ಮ ಬಳಿ ಇದೆ. ಅವುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡದಿರಲು ₹ 1 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು’ ಎಂದು ಉಪನ್ಯಾಸಕಿ ದೂರಿನಲ್ಲಿ ಹೇಳಿದ್ದಾರೆ.

‘ಜೂನ್‌ 16ರಂದು ಹಣಕ್ಕಾಗಿ ಮತ್ತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಮಾತುಕತೆಯ ಬಳಿಕ ₹22 ಲಕ್ಷ ನೀಡಲು ಒಪ್ಪಿದ್ದು, ಮೂರು ಚೆಕ್‌ ನೀಡಿದ್ದೆವು. ಬಳಿಕ ಮತ್ತೆ ಕರೆ ಮಾಡಿದ್ದ ದಂಪತಿ, ‘ಮಗಳಿಗೆ ಗರ್ಭಪಾತ ಮಾಡಿಸಿದರೆ ನಿಮಗೆ ಏನೂ ತೊಂದರೆ ಆಗುವುದಿಲ್ಲ. ಅದಕ್ಕೆ ಹಣ ಬೇಕು. ‌ಇಲ್ಲದಿದ್ದರೆ ನಿಮ್ಮನ್ನು ಜೈಲಿಗೆ ಕಳುಹಿಸಿ, ನಿಮ್ಮ ಮತ್ತು ನಿಮ್ಮ ಮಗನ ಜೀವನ ಹಾಳು ಮಾಡುತ್ತೇವೆ ಎಂದು ಬೆದರಿಸಿದರು.ಜೂನ್‌ 17ರಂದು ₹ 20 ಲಕ್ಷ ಹಣವನ್ನು ಆರ್‌ಟಿಜಿಎಸ್‌ ಮೂಲಕ ಬಂಧಿತ ಲೀನಾ ಕವಿತಾಳ ಬ್ಯಾಂಕ್‌ ಖಾತೆಗೆ ಜಮೆ ಮಾಡಿಸಿಕೊಂಡಿದ್ದರು. ಅಷ್ಟಕ್ಕೂ ಸುಮ್ಮನಾಗದ ಆರೋಪಿಗಳು, ಹೆಚ್ಚುವರಿಯಾಗಿ ₹6 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದೂ ದೂರಿನಲ್ಲಿ ಹೇಳಿದ್ದಾರೆ.

‘ಮಗನನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ, ಹಣಕ್ಕಾಗಿ ಬೇಡಿಕೆ ಇಟ್ಟ ದಂಪತಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಮಲ್ಲೇಶ್ವರ ಠಾಣೆಗೆ ಉಪನ್ಯಾಸಕಿ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.