ಹೆಸರಘಟ್ಟ: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಮೂರು ದಿನಗಳ ತೋಟಗಾರಿಕೆ ಮೇಳ ಶನಿವಾರ ಮುಕ್ತಾಯಗೊಂಡಿತು. ಕೊನೆಯ ದಿನ 50 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು.
‘ವಿಕಸಿತ ಭಾರತಕ್ಕಾಗಿ ತೋಟಗಾರಿಕೆ ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ’ ಶೀರ್ಷಿಕೆ ಅಡಿಯಲ್ಲಿ ಈ ಬಾರಿ ಮೇಳವನ್ನು ಆಯೋಜಿಸಲಾಗಿತ್ತು.
ಕೊನೆಯ ದಿನ ರೈತರು, ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಸೇರಿದಂತೆ ಹೆಚ್ಚು ಸಂಖ್ಯೆಯಲ್ಲಿ ಮೇಳದಲ್ಲಿ ಕಾಣಿಸಿಕೊಂಡರು. ಆಧುನಿಕ ಕೃಷಿ ಉಪಕರಣಗಳು ಸೋಲಾರ್ ಪಂಪ್, ಸೆಟ್ ಅಳವಡಿಕೆ, ಕೃಷಿ ಡ್ರೋನ್ ಉಪಕರಣ, ಮಣ್ಣು ರಹಿತ ತರಕಾರಿ, ಕೃಷಿ ಪ್ರಾತ್ಯಕ್ಷಿಕೆಗಳ ಮಳಿಗೆಗಳಲ್ಲಿ ಹಚ್ಚು ಜನರು ಮಾಹಿತಿ ಪಡೆದರು. ಬಗೆ ಬಗೆಯ ನೈಜ ಹಣ್ಣುಗಳಿಂದ ಮಾಡಿದ ಐಸ್ ಕ್ರೀಮ್ ಸವಿದು ಹಲವರು ದಣಿವಾರಿಸಿಕೊಂಡರು.
ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಮಾಡಲು ಗೊಂಬೆ ಆಟದ ಮೂಲಕ ರೈತರಿಗೆ ಅರಿವು ಮತ್ತು ತಂತ್ರಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು.
ಮೇಳದಲ್ಲಿ ಮೊದಲ ಬಾರಿಗೆ ಕಿತ್ತಳೆ ಬಣ್ಣದ ಕಲ್ಲಂಗಡಿಯನ್ನು ರೈತರಿಗೆ ಪರಿಚಯಿಸಲಾಗಿತ್ತು. ಇದರಲ್ಲಿ ಹೆಚ್ಚಿನ ಪೋಷಕಾಂಶ, ವಿಟಮಿನ್ ಸಿ ಹೇರಳವಾಗಿದೆ. ಈ ಕಿತ್ತಳೆ ಬಣ್ಣದ ಕಲ್ಲಂಗಡಿಯು ಬಿತ್ತನೆ ಮಾಡಿದ ದಿನದಿಂದ 75ರಿಂದ 80 ದಿನಗಳೊಳಗೆ ಕೊಯ್ಲಿಗೆ ಬರುತ್ತದೆ. ಮಾಗಿದ ಹಣ್ಣಿನಿಂದಲೇ ಬೀಜ ಉತ್ಪಾದನೆಯನ್ನು ಮಾಡಬಹುದು. ಇದು ಇನ್ನೂ ಹೊಸ ತಳಿಯಾಗಿರುವುದರಿಂದ ಬೀಜವನ್ನು ಆರು ತಿಂಗಳ ನಂತರ ಮಾರುಕಟ್ಟೆಗೆ ಬಿಡಲಾಗುವುದು ಎಂದು ಉಸ್ತುವಾರಿ ಯಶವಂತ್ ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸದ ಡಾ. ಸಿ.ಎನ್ ಮಂಜುನಾಥ್, ರೈತರ ಮನಸ್ಥಿತಿ ಬದಲಾಗಬೇಕು. ಆಧುನಿಕ ತಂತ್ರಜ್ಞಾನಗಳ ಫಲ ಪಡೆದುಕೊಳ್ಳಬೇಕು’ ಎಂದರು.
ಕಾರ್ಯಕ್ರಮದಲ್ಲಿ 15 ಪ್ರಗತಿಪರ ರೈತರಿಗೆ ಅತ್ಯುತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.