ADVERTISEMENT

ಕೋವಿಡ್‌ ಪತ್ತೆ: ಹಾಸ್ಟೆಲ್‌ಗಳಲ್ಲೂ ಕಂಟೈನ್‌ಮೆಂಟ್‌ ವಲಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 14:22 IST
Last Updated 16 ಆಗಸ್ಟ್ 2021, 14:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ನಗರದ ಕೆಲವು ವಿದ್ಯಾರ್ಥಿನಿಲಯಗಳಲ್ಲೂ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಮೂರಕ್ಕಿಂತ ಹೆಚ್ಚು ಮಂದಿಯಲ್ಲಿ ಕೋವಿಡ್‌ ಕಾಣಿಸಿಕೊಂಡಿರುವ ಹಾಸ್ಟೆಲ್‌ಗಳನ್ನೂ ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸಿ, ಸೋಂಕು ಹರಡುವಿಕೆ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಕಂಟೈನ್‌ಮೆಂಟ್ ವಲಯ ಎಂದು ಗುರುತಿಸಲಾದ ಹಾಸ್ಟೆಲ್‌ಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ನಿವಾಸಿಗಳನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತೇವೆ. ಸೋಂಕಿತರ ಪ್ರತ್ಯೇಕ ವಾಸಕ್ಕೆ ಅಲ್ಲಿ ಅವಕಾಶ ಇಲ್ಲದಿದ್ದರೆ, ಅಂತಹವರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ವರ್ಗಾಯಿಸುತ್ತೇವೆ’ ಎಂದರು.

ನಗರದಲ್ಲಿ ಕೆಲವು ಅಪಾರ್ಟ್‌ಮೆಂಟ್‌ ಸಮುಚ್ಚಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯುಎ) ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸುತ್ತಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ನಗರದಲ್ಲಿ 11 ಲಕ್ಷ ಮಂದಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ನೆಲೆಸಿದ್ದಾರೆ. ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಆರ್‌ಡಬ್ಲ್ಯುಎ ಪ್ರತಿನಿಧಿಗಳ ಜೊತೆ ಬಿಬಿಎಂಪಿ ಮಾತುಕತೆ ನಡೆಸುತ್ತಿದೆ. ಅವರೂ ಕೋವಿಡ್‌ ನಿಯಂತ್ರಣಕ್ಕೆ ಸ್ಪಂದಿಸುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘30 ದಿನಗಳ ಹಿಂದೆ, 10ಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳಿರುವ ಪ್ರದೇಶವನ್ನು ಮಾತ್ರ ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸುತ್ತಿದ್ದೆವು. ಈಗ ಪ್ರಕರಣಗಳ ಸಂಖ್ಯೆ3ಕ್ಕಿಂತ ಜಾಸ್ತಿ ಇರುವ ಪ್ರದೇಶವನ್ನೂ ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸುತ್ತಿದ್ದೇವೆ. ಹಾಗಾಗಿ ನಗರದಲ್ಲಿ ಕಂಟೈನ್‌ಮೆಂಟ್‌ ವಲಯಗಳ ಸಂಖ್ಯೆ ಜಾಸ್ತಿ ಆಗಿರುವಂತೆ ತೋರುತ್ತದೆ. ಅವುಗಳ ಸಂಖ್ಯೆ ಹೆಚ್ಚು ಇದೆ ಎಂದರೆ ಕೋವಿಡ್‌ ನಿಯಂತ್ರಣಕ್ಕೆ ಬಿಬಿಎಂಪಿ ಹೆಚ್ಚು ನಿಗಾ ಇಡುತ್ತಿದೆ ಎಂದರ್ಥ’ ಎಂದು ವಿವರಿಸಿದರು.

‘ಕೊರೋನಾ ಸೋಂಕು ದೃಢಪಟ್ಟವರಲ್ಲಿ ಶೆ 95ರಷ್ಟು ಮಂದಿ ಯಾವುದೇ ಸಮಸ್ಯೆ ಇಲ್ಲದೆಯೇ ಗುಣಮುಖರಾಗುತ್ತಾರೆ. ಅವರು 15 ದಿನಗಳಲ್ಲಿ ಇತರರಿಗೆ ಸೋಂಕು ಹರಡಿಸಬಾರದು ಎಂಬ ಉದ್ದೇಶದಿಂದ ಕಂಟೈನ್‌ಮೆಂಟ್‌ ವಲಯ ಗುರುತಿಸಲಾಗುತ್ತದೆ. ಆ ಪರಿಸರದಲ್ಲಿ ಕೋವಿಡ್‌ ಪರೀಕ್ಷೆಯ ಪ್ರಮಾಣವನ್ನೂ ಹೆಚ್ಚಿಸಲಾಗುತ್ತದೆ’ ಎಂದು ತಿಳಿಸಿದರು.

‘ವಿವಿಧ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ 180 ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಖಾಸಗಿಯಾಗಿ ಆಸ್ಪತ್ರೆಗೆ ದಾಖಲಾದವರಲ್ಲೂ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ 50ಕ್ಕಿಂತ ಜಾಸ್ತಿ ಇಲ್ಲ’ ಎಂದರು.

‘ನಗರದಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾದವರಲ್ಲಿ ಸೋಂಕು ಪತ್ತೆ ದರ ಶೇ 1ಕ್ಕಿಂತಲೂ ಕಡಿಮೆ ಇದೆ. ಅನೇಕ ದಿನಗಳಿಂದ ಈ ದರವು ಶೇ 0.06ನಷ್ಟು ಮಾತ್ರ ಇದೆ. ಇದನ್ನು ಇನ್ನಷ್ಟು ಕಡಿಮೆ ಮಾಡುವತ್ತ ಪ್ರಯತ್ನ ಸಾಗಿದೆ’ ಎಂದರು.

‘ಶಿಕ್ಷಕರಿಗೆ ಲಸಿಕೆ ಕಡ್ಡಾಯ’

ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು ಹಾಗೂ ಸಹಾಯಕ ಸಿಬ್ಬಂದಿ ತರಗತಿ ಆರಂಭಕ್ಕೆ ಮುನ್ನವೇ ಕೋವಿಡ್‌ ಲಸಿಕೆ ಪಡೆದಿರುವುದು ಕಡ್ಡಾಯ’ ಎಂದು ಗೌರವ ಗುಪ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.